VIDEO: ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಆಸ್ಟ್ರೇಲಿಯಾ

australia and england match
Published on

ಮ್ಯಾಂಚೆಸ್ಟರ್: ಸ್ಪಿನ್ನರ್ ಆಡಂ ಜಂಪಾ (55ಕ್ಕೆ 4) ಹಾಗೂ ವೇಗಿ ಜೋಶ್ ಹ್ಯಾಸಲ್‌ವುಡ್ (26ಕ್ಕೆ 3) ಮಾರಕ ದಾಳಿ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ಎದುರು 19 ರನ್‌ಗಳಿಂದ ಜಯ ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಯಿಂದ ಮುನ್ನಡೆ ಸಾಧಿಸಿತು. ಟಿ20 ಕ್ರಿಕೆಟ್‌ನಲ್ಲಿ ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಹಾಕಿತು.

ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ (77ರನ್, 59 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಮಿಚೆಲ್ ಮಾರ್ಷ್ (73ರನ್, 100 ಎಸೆತ, 6 ಬೌಂಡರಿ) ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್ ಫಲವಾಗಿ 9 ವಿಕೆಟ್‌ಗೆ 294 ರನ್ ಪೇರಿಸಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ, ಸ್ಯಾಮ್ ಬಿಲ್ಲಿಂಗ್ಸ್ (118ರನ್, 110 ಎಸೆತ, 14 ಬೌಂಡರಿ, 2 ಸಿಕ್ಸರ್) ಹಾಗೂ ಜಾನಿ ಬೇರ್‌ಸ್ಟೋ (84ರನ್, 107 ಎಸೆತ, 4 ಬೌಂಡರಿ, 4 ಸಿಕ್ಸರ್) ಜೋಡಿಯ ಪ್ರತಿ ಹೋರಾಟದ ನಡುವೆಯೂ 9 ವಿಕೆಟ್‌ಗೆ 275 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ : 50 ಓವರ್‌ಗಳಲ್ಲಿ 9 ವಿಕೆಟ್‌ಗೆ 294 (ಸ್ಟೋಯಿನಿಸ್ 43, ಮಾರ್ಷ್ 73, ಮ್ಯಾಕ್ಸ್‌ವೆಲ್ 77, ಆರ್ಚರ್ 57ಕ್ಕೆ 3, ಮಾರ್ಕ್ ವುಡ್ 54ಕ್ಕೆ 3, ರಶೀದ್ 55ಕ್ಕೆ 2). ಇಂಗ್ಲೆಂಡ್: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 275 (ಜಾನಿ ಬೇರ್‌ಸ್ಟೋ 84, ಬಿಲ್ಲಿಂಗ್ಸ್ 118, ಮಾರ್ಗನ್ 23, ಹ್ಯಾಜಲ್‌ವುಡ್ 26ಕ್ಕೆ 3, ಜಂಪಾ 55ಕ್ಕೆ 4, ಕಮ್ಮಿನ್ಸ್ 74ಕ್ಕೆ 1, ಮಾರ್ಷ್ 29ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net