ದಿ ಹಂಡ್ರೆಡ್‌ ಟೂರ್ನಿಯ ಓವಲ್ ಇನ್ವಿನ್ಸಿಬಲ್ಸ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸೇರ್ಪಡೆ

web mi
Published on

ಮುಂಬೈ:ಮುಂಬೈ ಇಂಡಿಯನ್ಸ್​ನ (ಎಂಐ) ಮಾಲೀಕರಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್.ಐ.ಎಲ್.) ತನ್ನ ಅಂಗಸಂಸ್ಥೆಯಾದ ಆರ್.ಐ.ಎಸ್.ಇ. ವರ್ಲ್ಡ್ ವೈಡ್ (RISE Worldwide) ಮೂಲಕ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯ ಫ್ರಾಂಚೈಸಿಯಾದ ಲಂಡನ್ ಮೂಲದ ಓವಲ್ ಇನ್ವಿನ್ಸಿಬಲ್ಸ್‌ನೊಂದಿಗೆ ಪಾಲುದಾರ ಆಗಿರುವುದನ್ನು ಮಂಗಳವಾರ  ಅಧಿಕೃತವಾಗಿ ಪ್ರಕಟಿಸಿದೆ. ಕಳೆದ ವಾರಾಂತ್ಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಲೀಗ್ ಪ್ರಶಸ್ತಿಯನ್ನು ಎತ್ತಿರುವ ಎಂಐ, 2023 ಮತ್ತು 2024ರ ದಿ ಹಂಡ್ರೆಡ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಹಾಗೂ ಹಾಲಿ ಚಾಂಪಿಯನ್‌ ಆಗಿರುವ ಪುರುಷರ ತಂಡವನ್ನು ಮತ್ತು 100 ಎಸೆತಗಳ ಲೀಗ್‌ನ 2021ರ ಉದ್ಘಾಟನಾ ಆವೃತ್ತಿ ವಿಜೇತ ಹಾಗೂ 2022ರಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿರುವ ಬಲಿಷ್ಠ ಮಹಿಳಾ ತಂಡವನ್ನು ತನ್ನ ಕುಟುಂಬಕ್ಕೆ (#OneFamily) ಸ್ವಾಗತಿಸಲು ಹೆಮ್ಮೆಪಡುತ್ತದೆ.

"ಕ್ರಿಕೆಟ್ ಈಗ ಕೇವಲ ಕ್ರೀಡೆಗಿಂತ ಹೆಚ್ಚಾಗಿದೆ. ಇದು ಭೌಗೋಳಿಕತೆ ಮತ್ತು ಸಂಸ್ಕೃತಿಗಳಾದ್ಯಂತ ಜನರನ್ನು ಒಂದುಗೂಡಿಸುವ ಪ್ಯಾಷನ್ ಆಗಿದೆ. ಓವಲ್ ಇನ್ವಿನ್ಸಿಬಲ್‌ ತಂಡವನ್ನು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸುವುದು ಹೆಮ್ಮೆ ಮತ್ತು ವಿಶೇಷ ಕ್ಷಣವಾಗಿದೆ. ಈ ಪಾಲುದಾರಿಕೆಯೊಂದಿಗೆ ನಾವು ನಮ್ಮ ಎಂಐ ಅಭಿಮಾನಿಗಳನ್ನು ಭಾರತ, ನ್ಯೂಯಾರ್ಕ್, ಯುಎಇ, ದಕ್ಷಿಣ ಆಫ್ರಿಕಾ ಮತ್ತು ಈಗ ಇಂಗ್ಲೆಂಡ್ ಗೂ ವಿಸ್ತರಿಸಿದಂತಾಗಿದೆ. ನಮ್ಮ ಜಾಗತಿಕ ಕ್ರಿಕೆಟ್ ಜರ್ನಿಯಲ್ಲಿ ಇದು ಹೊಸ ಅಧ್ಯಯವಾಗಿದೆ. ಮುಂಬೈ ಇಂಡಿಯನ್ಸ್‌ನಲ್ಲಿ ನಾವು ಯುವ ಪ್ರತಿಭೆಗಳನ್ನು ಪೋಷಿಸಲು, ಚಾಂಪಿಯನ್ ತಂಡಗಳನ್ನು ಕಟ್ಟಲು ಮತ್ತು ಅಭಿಮಾನಿಗಳನ್ನು ಆಟಕ್ಕೆ ಹತ್ತಿರ ತರಲು ಬದ್ಧರಾಗಿದ್ದೇವೆ" ಎಂದು ನೀತಾ ಎಂ. ಅಂಬಾನಿ ಅವರು ಹೇಳಿದರು.

ಈ ಮೈಲಿಗಲ್ಲು ಜಾಗತಿಕ ಕ್ರಿಕೆಟ್ ಪವರ್‌ಹೌಸ್ ಆಗಿ ಎಂಐನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸುತ್ತದೆ. ಈ ಒಪ್ಪಂದದ ಪ್ರಕ್ರಿಯೆ ಪೂರ್ಣಗೊಳ್ಳುವುದರೊಂದಿಗೆ,  ನಾಲ್ಕು ಖಂಡಗಳಲ್ಲಿ ಮತ್ತು ಐದು ದೇಶಗಳಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಒಟ್ಟು ಏಳು ಕ್ರಿಕೆಟ್ ತಂಡಗಳು ಎಂಐ ಒಡೆತನಕ್ಕೆ ಒಳಪಟ್ಟಂತಾಗುತ್ತದೆ. ಓವಲ್ ಇನ್ವಿನ್ಸಿಬಲ್ಸ್‌ನಲ್ಲಿ 49% ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ವಹಿವಾಟಿನ ಪೂರ್ಣಗೊಳಿಸುವಿಕೆಯು ಔಪಚಾರಿಕ ಮತ್ತು ದಾಖಲಾತಿ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ.

 "ಹಂಡ್ರೆಡ್‌ನ ಅತ್ಯಂತ ಯಶಸ್ವಿ ತಂಡವಾದ ಓವಲ್ ಇನ್ವಿನ್ಸಿಬಲ್ಸ್‌ನ ಭಾಗವಾಗಲು ನಾವು ಸಂತೋಷಪಡುತ್ತೇವೆ ಮತ್ತು ಅವರನ್ನು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ಇಂಗ್ಲೆಂಡ್ ತನ್ನ ಶ್ರೀಮಂತ ಕ್ರಿಕೆಟ್ ಸಂಸ್ಕೃತಿಯೊಂದಿಗೆ ಯಾವಾಗಲೂ ಆಟಕ್ಕೆ ವಿಶೇಷವಾಗಿದೆ. ಕ್ರಿಕೆಟ್‌ನ ಕೆಲವು ಶ್ರೇಷ್ಠ ಕ್ಷಣಗಳಿಗೆ ಸಾಕ್ಷಿಯಾದ ಐತಿಹಾಸಿಕ ಓವಲ್ ಅನ್ನು ನಾವು ನಮ್ಮ ತವರು ಮೈದಾನವಾಗಿ ಹೊಂದುವುದು ನಿಜವಾಗಿಯೂ ವಿಶೇಷವಾಗಿದೆ. ನಮ್ಮಂತೆ ಸಮಾನ ಮನಸ್ಕರಾದ ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಜೊತೆಗೆ ಕಾರ್ಯ ನಿರ್ವಹಿಸುವುದನ್ನು ಎದುರು ನೋಡುತ್ತಿದ್ದೇವೆ. ನಾವು ಪ್ರೀತಿಸುವ ಕ್ರೀಡೆಯಲ್ಲಿ ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುತ್ತಿದ್ದೇವೆ" ಎಂದು ಆಕಾಶ್ ಎಂ. ಅಂಬಾನಿ ಅವರು ಹೇಳಿದರು.

 "ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಸರ್ರೆಯು ಮುಂಚೂಣಿಯಲ್ಲಿ ಸಾಗುವುದನ್ನು  ಖಚಿತಪಡಿಸಿಕೊಳ್ಳಲು ನಾವು ಉತ್ತಮ ಪಾಲುದಾರರನ್ನು ಬಯಸಿದ್ದೆವು ಮತ್ತು ನಮ್ಮ ಆಸೆಗೆ ತಕ್ಕಂತೆ ನಮಗೆ ಮುಂಬೈ ಇಂಡಿಯನ್ಸ್ ದೊರೆತಿದ್ದಾರೆ. ಎಂಐ ಕೂಡ ಕ್ರಿಕೆಟ್‌ ಬಗ್ಗೆ ನಮ್ಮಂತೆಯೇ ಪ್ಯಾಷನ್ ಹೊಂದಿದೆ. ಎಂಐ ಐಪಿಎಲ್‌ನಲ್ಲಿ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ತಂಡವನ್ನು ಹೊಂದಿದೆ. ಈ ಪಾಲುದಾರಿಕೆಯು ಸರ್ರೆ ಸಿ.ಸಿ.ಸಿ. ಮತ್ತು ನಮ್ಮ ದಿ ಹಂಡ್ರೆಡ್ ತಂಡಕ್ಕೆ ನಿರಂತರ ಯಶಸ್ಸನ್ನು ತರುತ್ತದೆ ಎಂದು ನಾವು ನಂಬುತ್ತೇವೆ. ಕ್ರಿಕೆಟ್‌ನ ಹೊರತಾಗಿ, ಆರ್‌ಐಎಲ್‌ನ ಜಾಗತಿಕ ವ್ಯವಹಾರದ ದೊಡ್ಡ ಯಶಸ್ಸು ಸರ್ರೆಗೆ ಮೈದಾನದ ಹೊರಗೆ ಕೂಡ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ. ನೀತಾ ಅಂಬಾನಿ, ಆಕಾಶ್ ಮತ್ತು ಅವರ ತಂಡವನ್ನು ನಮ್ಮ ಹೊಸ ಪಾಲುದಾರರಾಗಿ ಸ್ವಾಗತಿಸಲು ನಾನು ಹೆಚ್ಚು ಉತ್ಸುಕನಾಗಿದ್ದೇನೆ" ಎಂದು ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಒಲಿ ಸ್ಲಿಪ್ಪರ್ ಹೇಳಿದರು.

ಮುಂಬೈ ಇಂಡಿಯನ್ಸ್ ವಿಶ್ವ ದರ್ಜೆಯ ಕ್ರಿಕೆಟ್ ತಂಡಗಳನ್ನು ಕಟ್ಟುವಲ್ಲಿ ಹೆಚ್ಚಿನ ಅನುಭವ ಹೊಂದಿದೆ. ಆಟಗಾರರನ್ನು ಪೋಷಿಸಲು ಮತ್ತು ಜಾಗತಿಕವಾಗಿ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳಲು ಬಲವಾದ ಬದ್ಧತೆಯನ್ನು ಹೊಂದಿದೆ. ಎಂಐ ಇದುವರೆಗೆ ನಾಲ್ಕು ದೇಶಗಳಲ್ಲಿ ಮತ್ತು ಮೂರು ಖಂಡಗಳಲ್ಲಿ ಐದು ಟಿ20 ಕ್ರಿಕೆಟ್ ತಂಡಗಳನ್ನು ಹೊಂದಿತ್ತು. ಈಗ ನಾಲ್ಕು ಖಂಡಗಳು ಮತ್ತು ಐದು ದೇಶಗಳಾದ್ಯಂತ ಏಳು ತಂಡಗಳನ್ನು ಹೊಂದಿದಂತಾಗಿದೆ.

ಕಳೆದ 17 ವರ್ಷಗಳಲ್ಲಿ ಎಂಐ ಕುಟುಂಬವು ಐದು ಐಪಿಎಲ್ ಚಾಂಪಿಯನ್‌ಶಿಪ್‌ಗಳು, ಎರಡು ಚಾಂಪಿಯನ್ಸ್ ಲೀಗ್ ವಿಜಯಗಳು ಮತ್ತು 2023ರ ಉದ್ಘಾಟನಾ ಡಬ್ಲುಪಿಎಲ್ ಮತ್ತು ಮೇಜರ್ ಲೀಗ್ ಕ್ರಿಕೆಟ್ ಪ್ರಶಸ್ತಿಗಳನ್ನು ಒಳಗೊಂಡಂತೆ ಜಗತ್ತಿನಾದ್ಯಂತ 11 ಲೀಗ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net