ಯುಎಇಗೆ ತೆರಳಿದ ಮುಂಬೈ ಇಂಡಿಯನ್ಸ್ , ಸಿಎಸ್‌ಕೆ ತಂಡದ ಆಟಗಾರರು

csk and mumbia ipl players for web
Published on

ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು 14ನೇ ಐಪಿಎಲ್‌ನ ಭಾಗ-2ರಲ್ಲಿ ಆಡುವ ಸಲುವಾಗಿ ಶುಕ್ರವಾರ ದುಬೈಗೆ ತೆರಳಿದವು. ಭಾರತ ತಂಡದ ಮಾಜಿ ನಾಯಕ ಧೋನಿ ಜತೆ ಕೆಲ ಆಟಗಾರರು ತೆರಳುತ್ತಿರುವ ಫೋಟೋವನ್ನು ಸಿಎಸ್‌ಕೆ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಕಳೆದ ವರ್ಷದ ಆಗಸ್ಟ್ 15 ರಂದು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ನಿವೃತ್ತಿ ಘೋಷಿಸಿದ್ದರು. ಬಳಿಕ ಕೇವಲ ಐಪಿಎಲ್‌ನಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್ ಭಾಗ-2ಕ್ಕೆ ಸೆಪ್ಟೆಂಬರ್ 19ರಂದು ಚಾಲನೆ ಸಿಗಲಿದೆ. ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ತಂಡಗಳು ಮೊದಲ ಪಂದ್ಯದಲ್ಲಿ ಎದುರಾಗಲಿವೆ.

ಬಯೋಸುರಕ್ಷತಾ ವಲಯದಲ್ಲೇ ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿತ್ತು. ಅಕ್ಟೋಬರ್ 8 ರಂದು ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಕಡೇ ಲೀಗ್ ಪಂದ್ಯ ನಡೆಯಲಿದೆ. ಭಾರತದಲ್ಲಿ ಐಪಿಎಲ್ ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಯುಎಇಗೆ ಸ್ಥಳಾಂತರಿಸಲಾಯಿತು.

ಬಯೋ ಸುರಕ್ಷತಾ ವಲಯದಲ್ಲಿ ಆಟಗಾರರ ಮೇಲೆ ನಿಗಾವಹಿಸುವ ಸಲುವಾಗಿ ಬಿಸಿಸಿಐ ಬಬಲ್ ಇನ್‌ಗ್ರಿಟಿ ಅಧಿಕಾರಿಗಳನ್ನು ನೇಮಿಸಿದೆ. ಅಲ್ಲದೆ, ಸುರಕ್ಷಿತವಾಗಿ ಲೀಗ್ ಆಯೋಜಿಸುವ ಸಲುವಾಗಿ 46 ಪುಟಗಳ ಮಾರ್ಗಸೂಚಿಯನ್ನು ಬಿಸಿಸಿಐ ಸಿದ್ಧಪಡಿಸಿದೆ. ಲೀಗ್‌ನಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್‌ನಲ್ಲಿ ಯುಎಇಯಲ್ಲೇ ಟಿ20 ವಿಶ್ವಕಪ್‌ಗೆ ಚಾಲನೆ ಸಿಗಲಿದೆ. ಹೀಗಾಗಿ ಭಾರತ ತಂಡದ ಟಿ20 ಆಟಗಾರರು ಅರಬ್ ನಾಡಿನಲ್ಲೇ ಉಳಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net