ಭಾರತೀಯ ಕ್ರಿಕೆಟ್​ನಲ್ಲೂ ವರ್ಣಭೇದ!: ದೊಡ್ಡ ಗಣೇಶ್, ಮುಕುಂದ್​ಗೆ ಇನ್ನೂ ಕಾಡುತ್ತಿದೆ ನೆನಪು

Dodda Ganesh and Mukund
Published on

ಬೆಂಗಳೂರು: ಕೋವಿಡ್-19 ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಮಧ್ಯೆಯೇ ವರ್ಣಭೇದದ ಗಲಾಟೆಯೂ ಜೋರಾಗಿಯೇ ನಡೆಯುತ್ತಿದೆ. ಮೇ 25ರಂದು ಅಮೆರಿಕದಲ್ಲಿ ಜಾರ್ಜ್ ಫ್ಲಾಯ್್ಡನ್ನು ಸ್ಥಳೀಯ ಪೊಲೀಸರು ಕೊಂದಿದ್ದೇ ತಡ, ಜಾಗತಿಕ ಕ್ರೀಡಾಕ್ಷೇತ್ರದಲೂ ವರ್ಣಭೇದದ ಆರೋಪಗಳು ಕೇಳಿ ಬರುತ್ತಿವೆ. ಎರಡು ದಿನಗಳ ಹಿಂದಷ್ಟೇ ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಕ್ರಿಸ್ ಗೇಲ್ ಹಾಗೂ ಡರೇನ್ ಸ್ಯಾಮಿ ಕ್ರಿಕೆಟ್​ನಲ್ಲೂ ಜನಾಂಗೀಯ ಭೇದವಿದೆ ಎಂದು ವಾದಿಸಿದ್ದರು. ಇದರ ಬೆನ್ನಲ್ಲೇ ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಅನುಭವದ ಕುರಿತು ಮೆಲುಕು ಹಾಕಿದ್ದಾರೆ. ಈ ಹಿಂದೆಯೇ ವರ್ಣಭೇದದ ಆರೋಪ ಮಾಡಿದ್ದ ಭಾರತ ತಂಡದ ಮತ್ತೋರ್ವ ಮಾಜಿ ಆಟಗಾರ ತಮಿಳುನಾಡಿನ ಅಭಿನವ್ ಮುಕುಂದ್ ಕೂಡ ದೊಡ್ಡ ಗಣೇಶ್ ಮಾತಿಗೆ ಧ್ವನಿಗೂಡಿಸಿದ್ದಾರೆ.

2017ರಲ್ಲಿ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿ ವೇಳೆ ವರ್ಣಭೇದ ಎದುರಿಸಿದ್ದೆ. ವೃತ್ತಿಜೀವನದಲ್ಲಿ ಹಲವು ಬಾರಿ ಇಂಥ ಘಟನೆ ಎದುರಿಸಿರುವೆ ಎಂದು ತಮಿಳುನಾಡು ಆರಂಭಿಕ ಅಭಿನವ್ ಮುಕುಂದ್ ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳುತ್ತ ದೊಡ್ಡ ಗಣೇಶ್, ‘ಅಭಿನವ್ ಮುಕುಂದ್​ರ ಕಥೆ ನನಗೆ ನನ್ನ ವೃತ್ತಿಜೀವನದ ಜನಾಂಗೀಯ ನಿಂದನೆಯನ್ನು ನೆನಪಿಸಿದೆ. ಭಾರತೀಯ ದಿಗ್ಗಜ ಆಟಗಾರರೊಬ್ಬರೂ ಅದಕ್ಕೆ ಸಾಕ್ಷಿಯಾಗಿದ್ದರು. ಆದರೆ ನಾನು ಅದರಿಂದ ಇನ್ನಷ್ಟು ಬಲಿಷ್ಠನಾದೆ. ನಾನು ಭಾರತ ಪರ ಆಡುವುದನ್ನು ಮತ್ತು ಕರ್ನಾಟಕ ಪರ 100ಕ್ಕೂ ಅಧಿಕ ಪಂದ್ಯವಾಡುವುದನ್ನು ತಡೆಯಲು ಅದರಿಂದಾಗಲಿಲ್ಲ. ಕಪ್ಪಗಿರೋರು ಮನುಷ್ಯರೇ, ಮೊದಲು ಮಾನವರಾಗಿ’ ಎಂದು ಬುಧವಾರ ಟ್ವೀಟಿಸಿದ್ದಾರೆ.

ದೊಡ್ಡ ಗಣೇಶ್ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಅಭಿನವ್ ಮುಕುಂದ್, ‘ಜನರಿಗೆ ತಮಗೆ ಸರಿ ಎನಿಸಿದಾಗ ವರ್ಣಭೇದದ ಮಾತನಾಡಲು ಅವಕಾಶ ನೀಡಬೇಕು. ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ನಡೆಯುತ್ತಿದ್ದ ಸಮಯದಲ್ಲೇ ನಾನು ಈ ಬಗ್ಗೆ ಮಾತನಾಡಿದ್ದೆ’ ಎಂದು ಟ್ವೀಟಿಸಿದ್ದಾರೆ.

ನೀವಿಬ್ಬರು ಮೊದಲೇ ಯಾಕೆ ಈ ಬಗ್ಗೆ ಮಾತನಾಡಲಿಲ್ಲ ಎಂದು ಕ್ರೀಡಾ ಪರ್ತಕರ್ತ ರೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿರುವುದಕ್ಕೆ ದೊಡ್ಡ ಗಣೇಶ್, ‘90ರ ದಶಕದಲ್ಲಿ ನನಗೆ ವರ್ಣಭೇದದ ಗಂಭೀರತೆ ಅರ್ಥವಾಗಿರಲಿಲ್ಲ. ಜತೆಗೆ ಆ ಬಗ್ಗೆ ಹೇಳಿಕೊಳ್ಳಲು ಸೂಕ್ತ ವೇದಿಕೆಯೂ ದೊರೆತಿರಲಿಲ್ಲ. ಭವಿಷ್ಯದಲ್ಲಿ ಯಾವ ಭಾರತೀಯನಿಗೂ ಅಂಥ ಘಟನೆ ಎದುರಿಸುವ ಸನ್ನಿವೇಶ ಬಾರದಿರಲಿ’ ಎಂದು ಮತ್ತೊಂದು ಟ್ವೀಟ್​ನಲ್ಲಿ ಉತ್ತರಿಸಿದ್ದಾರೆ. ರಾಷ್ಟ್ರೀಯ ತಂಡದ ಪರ 4 ಟೆಸ್ಟ್, ಏಕೈಕ ಏಕದಿನ ಪಂದ್ಯವಾಡಿರುವ ಗಣೇಶ್, 104 ಪ್ರಥಮ ದರ್ಜೆ ಪಂದ್ಯಗಳಿಂದ 365 ವಿಕೆಟ್ ಹಾಗೂ 89 ಲಿಸ್ಟ್ ಎ ಪಂದ್ಯಗಳಿಂದ 128 ವಿಕೆಟ್ ಪಡೆದಿದ್ದಾರೆ.

2011ರಿಂದ 2017ರ ನಡುವೆ ಭಾರತ ಪರ 7 ಟೆಸ್ಟ್ ಪಂದ್ಯಗಳನ್ನಾಡಿರುವ ಅಭಿನವ್ ಮುಕುಂದ್, 2017ರ ಆಗಸ್ಟ್​ನಲ್ಲಿ ಲಂಕಾ ಪ್ರವಾಸದ ನಡುವೆ ‘ನನ್ನ ಚರ್ಮದ ಬಣ್ಣವನ್ನು ನಿಂದಿಸಬೇಡಿ’ ಎಂದು ಟ್ವಿಟರ್​ನಲ್ಲಿ ಪತ್ರವೊಂದನ್ನು ಪ್ರಕಟಿಸಿದ್ದರು. ಅದರ ಬೆನ್ನಲ್ಲೇ, ನನ್ನ ಈ ಟ್ವೀಟ್ ಭಾರತ ತಂಡದ ಯಾವುದೇ ಆಟಗಾರರನ್ನು ಉದ್ದೇಶಿಸಿದ್ದಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net