

ರಾಂಚಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿ, ಮುಂಬರುವ ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಮುನ್ನಡೆಸಲು ಯುಎಇಯಲ್ಲಿ ಎಂಎಸ್ ಧೋನಿ ಸಜ್ಜಾಗುತ್ತಿದ್ದರೆ, ಇತ್ತ ಅವರ ತವರು ರಾಜ್ಯ ಜಾರ್ಖಂಡ್ನಲ್ಲಿ ವಿವಾದವೊಂದು ಅವರನ್ನು ಸುತ್ತಿಕೊಂಡಿದೆ.
ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಜೆಎಸ್ಸಿಎ) ಎಂಎಸ್ ಧೋನಿ 1,800 ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಈ ಬಗ್ಗೆ ಇತ್ತೀಚೆಗೆ ಜೆಎಸ್ಸಿಎಯ 2019-20ರ ಸಾಲಿನ ವಾರ್ಷಿಕ ವರದಿಯಲ್ಲೂ ದಾಖಲಿಸಲಾಗಿತ್ತು. ಈ ಅಲ್ಪ ಮೊತ್ತದ ಬಾಕಿಯ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿ ಧೋನಿ ಹೆಸರು ಉಲ್ಲೇಖಿಸಿ ಅವಮಾನ ಮಾಡಿದ ಬಗ್ಗೆ ಅವರ ಸ್ಥಳೀಯ ಅಭಿಮಾನಿಗಳು ಗರಂ ಆಗಿದ್ದರು. ಅಲ್ಲದೆ ಅಭಿಮಾನಿಗಳು 1,800 ರೂಪಾಯಿ ಸಂಗ್ರಹಿಸಿದ್ದರು. ಆದರೆ ಡ್ರಾಫ್ಟ್ ಮೂಲಕ ಇದನ್ನು ಪಾವತಿಸಲು ಮುಂದಾದಾಗ ಜೆಎಸ್ಸಿಎ ಅಧಿಕಾರಿಗಳು ಅದನ್ನು ಸ್ವೀಕರಿಸಿಲ್ಲ. ಇದರಿಂದ ಧೋನಿ ಅಭಿಮಾನಿಗಳು ಇನ್ನಷ್ಟು ಕೆರಳಿದ್ದಾರೆ.
ಧೋನಿ ಅವರಿಂದ 1,800 ರೂ. ಪಾವತಿಯಾಗುವುದು ಬಾಕಿ ಇದೆ ಎಂದು ಜೆಎಸ್ಸಿಎ ವಾರ್ಷಿಕ ವರದಿಯಲ್ಲಿದ್ದರೂ, ಅದು ಯಾವುದರ ಮೊತ್ತ ಎಂದು ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಜೆಎಸ್ಸಿಎ ಕಾರ್ಯದರ್ಶಿ ಸಂಜಯ್ ಸಾಹೇ ಅವರನ್ನು ಸಂಪರ್ಕಿಸಿದಾಗ, ಅದು ಧೋನಿ ಅವರ ಜೆಎಸ್ಸಿಎ ಆಜೀವ ಸದಸ್ಯತ್ವದ 10,000 ರೂಪಾಯಿ ಶುಲ್ಕದ ಜಿಎಸ್ಟಿ ಮೊತ್ತವಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಮಾಜಿ ಕ್ರಿಕೆಟಿಗ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹ್ನಾಥ್ ಪಾಠಕ್ ಅವರು, ಧೋನಿ ಅಭಿಮಾನಿಗಳಾದ ಕಾಲೇಜು ವಿದ್ಯಾರ್ಥಿಗಳು ಮತ್ತು ಇತರರಿಂದ 1,800 ರೂಪಾಯಿ ಸಂಗ್ರಹಿಸಿ, ಅದನ್ನು ಡ್ರಾಫ್ಟ್ ಮಾಡಿಕೊಂಡು ಜೆಎಸ್ಸಿಎ ಕಚೇರಿಗೆ ಹೋಗಿದ್ದರು. ಧೋನಿ ಬಾಕಿ ಉಳಿಸಿಕೊಂಡಿರುವ ಮೊತ್ತಕ್ಕೆ ಇದನ್ನು ಜಮಾ ಮಾಡಿಕೊಳ್ಳಿ ಎಂದು ಕೇಳಿಕೊಂಡರು. ಆದರೆ ಜೆಎಸ್ಸಿಎ ಅಧಿಕಾರಿಗಳು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಈ ಬಗ್ಗೆ ವಿವರಣೆ ನೀಡಿರುವ ಜೆಎಸ್ಸಿಎ ಕಾರ್ಯದರ್ಶಿ ಸಂಜಯ್ ಸಾಹೇ, ಧೋನಿ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಯಾರ್ಯಾರಿಂದಲೋ ಸ್ವೀಕರಿಸಲು ಸಾಧ್ಯವಿಲ್ಲ. ಧೋನಿ ಅಥವಾ ಅವರು ಸೂಚಿಸಿದ ಅಧಿಕೃತ ವ್ಯಕ್ತಿಗಳಿಂದ ಮಾತ್ರ ಆ ಮೊತ್ತವನ್ನು ಸ್ವೀಕರಿಸಲಾಗುವುದು ಎಂದಿದ್ದಾರೆ. ಜೆಎಸ್ಸಿಎ ವಾರ್ಷಿಕ ವರದಿ ಈ ವರ್ಷ ಮಾರ್ಚ್ 31ರಂದು ಮಂಡನೆಯಾಗಿತ್ತು. ಆ ಬಳಿಕ ಧೋನಿ ಬಂದು ಈಗಾಗಲೆ ಈ ಮೊತ್ತವನ್ನು ಪಾವತಿಸಿದ್ದಾರೆಯೇ ಎಂಬ ಬಗ್ಗೆಯೂ ಸಾಹೇ ಸ್ಪಷ್ಟ ಉತ್ತರ ನೀಡಿಲ್ಲ.
ಧೋನಿ ಅವರಿಗೆ ಜೆಎಸ್ಸಿಎ ಈ ಹಿಂದೆ ಗೌರವ ಸದಸ್ಯತ್ವವನ್ನಷ್ಟೇ ನೀಡಿತ್ತು. ಈ ಬಗ್ಗೆ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದ ಬಳಿಕ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅವರಿಗೆ ಆಜೀವ ಸದಸ್ಯತ್ವ ನೀಡಲು ನಿರ್ಧರಿಸಲಾಗಿತ್ತು. ಕಳೆದ ವಷ್ ಅಕ್ಟೋಬರ್ನಲ್ಲಿ ಇದಕ್ಕೆ ಜೆಎಸ್ಸಿಎ ವಾರ್ಷಿಕ ಮಹಾಸಭೆಯಲ್ಲಿ ಅಂಗೀಕಾರವೂ ದೊರೆತ ಬಳಿಕ ಧೋನಿ ಅವರ ಮನೆಗೆ ತೆರಳಿ 10 ಸಾವಿರ ರೂಪಾಯಿ ಮೊತ್ತದ ಚೆಕ್ ಪಡೆದುಕೊಳ್ಳಲಾಗಿತ್ತು. ಆ ವೇಳೆ ಜೆಎಸ್ಸಿಎ ಸದಸ್ಯರು ಜಿಎಸ್ಟಿ ಮೊತ್ತವನ್ನೂ ಸೇರಿಸಿ 11,800 ರೂ. ಮೊತ್ತದ ಚೆಕ್ ಏಕೆ ಪಡೆದುಕೊಂಡಿರಲಿಲ್ಲ. ಆಗ ಬೇಜವಾಬ್ದಾರಿತನ ತೋರಿ, ಈಗ ಏಕೆ ಧೋನಿ ಹೆಸರು ಕೆಡಿಸುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.