

ನವದೆಹಲಿ: ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಕಾತರರಾಗಿರುತ್ತಾರೆ. ವೃತ್ತಿಪರ ಕ್ಷೇತ್ರದಲ್ಲಿ ತಮ್ಮಿಷ್ಟದ ವ್ಯಕ್ತಿಯು ಮಾಡಿದ ಸಾಧನೆಗಳನ್ನು ಕೊಂಡಾಡುವ ಅಭಿಮಾನಿಗಳು ಅವರ ಪ್ರತಿಯೊಂದು ಚಲವಲನಗಳನ್ನು ಗಮನಿಸುತ್ತಿರುತ್ತಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ಬಳಿಕ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ತಮ್ಮಿಷ್ಟದ ವ್ಯಕ್ತಿಯನ್ನು ಎಲ್ಲ ಜಾಲತಾಣ ವೇದಿಕೆಯಲ್ಲಿ ಫಾಲೋ ಮಾಡುತ್ತಿರುತ್ತಾರೆ.
ಅಂದಹಾಗೆ ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರು ಕೇಳಿದ ಕೂಡಲೇ ಅವರ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ. ಏಕೆಂದರೆ ದೇಶದಲ್ಲಿರುವ ಕ್ರೀಡಾಭಿಮಾನಿಗಳಿಗೆ ಧೋನಿಯ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿರುತ್ತಾರೆ. ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಭಾರತಕ್ಕೆ ಎರಡನೇ ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟ ಧೋನಿ, ಭಾರತದ ಕ್ರಿಕೆಟ್ ಜಗತ್ತಿನಲ್ಲಿ ಎಂದೂ ಮರೆಯದ ಸಾಧನೆಯ ಶಿಖರವಾಗಿ ಉಳಿದುಕೊಂಡಿದ್ದಾರೆ. ನಿವೃತ್ತಿ ಪಡೆದಿದ್ದರೂ ಸಹ ಇಂದಿಗೂ ಧೋನಿ ಅವರ ಎಲ್ಲರ ಫೇವರಿಟ್ ಆಗಿದ್ದಾರೆ. ಇನ್ನು ಅವರ ವೈಯಕ್ತಿಕ ಜೀವನ ಸಹ ತೆರೆದ ಪುಸ್ತಕವಾಗಿದೆ. ಹೊಸದಾಗಿ ಹೇಳಲು ಏನು ಇಲ್ಲ ಎನ್ನಬಹುದು.
ಧೋನಿ ಅವರು ಕ್ರಿಕೆಟ್ ಜಗತ್ತಿನಲ್ಲಿ ಉತ್ತುಂಗದಲ್ಲಿರುವಾಗಲೇ 2010ರ ಜುಲೈ 4ರಂದು ಸಾಕ್ಷಿ ಅವರನ್ನು ಮದುವೆ ಆದರು. ದಂಪತಿಗೆ ಝಿವಾ ಹೆಸರಿನ ಮುದ್ದಾದ ಮಗಳಿದ್ದಾಳೆ. 2015ರ ಫೆ. 6ರಂದು ಝಿವಾ ಜನಿಸಿದಳು. ಝಿವಾ ಜನನದ ವೇಳೆ ಧೋನಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ವಿಶ್ವಕಪ್ನಲ್ಲಿ ಬಿಜಿಯಾಗಿದ್ದರು. ತಮ್ಮ ಕರ್ತವ್ಯವನ್ನು ಮುಗಿಸಿಯೇ ತನ್ನ ಮಗಳನ್ನು ನೋಡಲು ಭಾರತಕ್ಕೆ ಮರಳಿದ್ದರು.
ಧೋನಿ ಅವರಿಗೆ ತಮ್ಮ ಮಗಳು ಝಿವಾ ಅಂದರೆ ಪಂಚ ಪ್ರಾಣ. ಸಮಯ ಸಿಕ್ಕಾಗಲೆಲ್ಲ ಮಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ಝಿವಾ ಕೂಡ ಅಪ್ಪನ ಮಗಳು. ಧೋನಿ ಎಲ್ಲೇ ಇದ್ದರೂ ಅಲ್ಲಿ ಝಿವಾ ಇರುತ್ತಾಳೆ. ಆದರೆ, ಈಗ ಝಿವಾ ಓದಿನ ಕಡೆ ಗಮನ ಹರಿಸಿದ್ದಾಳೆ. ಸದ್ಯ ಝಿವಾಗೆ 8 ವರ್ಷ. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಓದುತ್ತಿದ್ದಾಳೆ. ಇನ್ನು ಝಿವಾಳ ಶಾಲೆಯ ಫೀಸ್ ಎಷ್ಟಿರಬಹುದು ಎಂಬ ಕುತೂಹಲ ಧೋನಿ ಅವರ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಅಂದಹಾಗೆ ಝಿವಾ ರಾಂಚಿಯ ಟೌರಿಯನ್ ವರ್ಲ್ಡ್ ಶಾಲೆಯ ವಿದ್ಯಾರ್ಥಿನಿ. ಈ ಟೌರಿಯನ್ ಶಾಲೆ ವಿಶ್ವದ ಉತ್ತಮವಾದ ಶಾಲೆಗಳಲ್ಲಿ ಒಂದು. ಹಾಗೇ ಅದರ ಫೀಸ್ ಕೂಡ ದುಬಾರಿ. ಧೋನಿ ಅವರಿಗೆ ತನ್ನ ಮಗಳು ಶೈಕ್ಷಣಿಕ, ಕ್ರೀಡೆ ಅಥವಾ ಕಲೆಯಲ್ಲಿ ಹಿಂದೆ ಉಳಿಯಲು ಬಯಸುವುದಿಲ್ಲ. ಹೀಗಾಗಿ ಎಲ್ಲವನ್ನು ಪೂರೈಸುವ ಟೌರಿಯನ್ ವರ್ಲ್ಡ್ ಶಾಲೆಗೆ ದಾಖಲಿಸಿದ್ದಾರೆ. ಟೌರಿಯನ್ ಶಾಲೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿರುವ ಶಾಲೆಯ ಶುಲ್ಕ ರಚನೆಯನ್ನು ನೋಡಿದರೆ, ಗ್ರೇಡ್ 2 ರಿಂದ 8ರವೆಗೆ ವಾರ್ಷಿಕವಾಗಿ 2 ಲಕ್ಷ 75 ಸಾವಿರ ರೂ. ಅನ್ನು ಪಾವತಿಸಬೇಕಾಗುತ್ತದೆ.
ಸದ್ಯ ಝಿವಾ ಮೂರನೇ ತರಗತಿ ವಿದ್ಯಾರ್ಥಿನಿ. ಅಲ್ಲದೆ, ಆಕೆ ಡೇ ಸ್ಕಾಲರ್ ಕೂಡ. ಆಕೆಯ ಪ್ರತಿ ತಿಂಗಳ ಶಾಲಾ ಶುಲ್ಕ 23 ಸಾವಿರ ರೂಪಾಯಿ. ಒಂದು ವೇಳೆ ಝಿವಾ ಈ ಶಾಲೆಯ ಹಾಸ್ಟೆಲ್ನಲ್ಲಿ ಉಳಿದುಕೊಳ್ಳುವಂತಾಗಿದ್ದರೆ ವರ್ಷಕ್ಕೆ 4,40,000 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು.
ಅಂದಹಾಗೆ ಧೋನಿ ಅವರಿಗೆ ಈ ಮೊತ್ತ ಹೊರೆ ಅಲ್ಲವೇ ಅಲ್ಲ. ಆದರೆ, ಸಾಮಾನ್ಯ ಜನರಿಗೆ ಇದು ಕೈಗೆಟುಕದ ಆಕಾಶ ಎಂಬುದರಲ್ಲಿ ತಪ್ಪಿಲ್ಲ. ಐಪಿಎಲ್ ಒಪ್ಪಂದ, ಬಿಸಿನೆಸ್ ಸೇರಿ ವಿವಿಧ ಮೂಲಗಳಿಂದ ಸಂಪಾದನೆ ಮಾಡುತ್ತಿರುವ ಧೋನಿ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳ ಬಳಗವನ್ನು ಧೋನಿ ಹೊಂದಿದ್ದಾರೆ. (ಏಜೆನ್ಸೀಸ್)