

MS Dhoni: ನಿನ್ನೆ (ಮಾ.23) ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತು. ರೋಚಕ ಹಂತಕ್ಕೆ ತಲುಪಿದ ಪಂದ್ಯವನ್ನು ಸಿಎಸ್ಕೆ 4 ವಿಕೆಟ್ಗಳ ಅಂತರದಲ್ಲಿ ಗೆದ್ದು ಬೀಗಿತು. ಈ ಮ್ಯಾಚ್ನಲ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳು, ಮುಂಬೈ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ರನ್ನು ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮಾಡಿದ ರೀತಿಗೆ ಕುಣಿದು ಕುಪ್ಪಳಿಸಿದರು.
43ನೇ ವಯಸ್ಸಿನಲ್ಲೂ 23ರ ಯುವಕರಂತೆ ಅದೇ ವೇಗ, ಅದೇ ನಿಖರತೆ, ಚಾಣಕ್ಷತನ ತೋರಿದ ಕ್ಯಾಪ್ಟನ್ ಕೂಲ್ರನ್ನು ಕಂಡು ಅಭಿಮಾನಿಗಳು ಮೈದಾನದ ತುಂಬೆಲ್ಲ ಧೋನಿ ಹೆಸರನ್ನು ಚೀರಾಡಿದರು. ಮಿಂಚಿನ ವೇಗದಲ್ಲಿ ಸೂರ್ಯಕುಮಾರ್ ವಿಕೆಟ್ ತೆಗೆದ ಧೋನಿ ವಿಡಿಯೋ, ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗಿ, ನೋಡುಗರ ಹುಬ್ಬೇರಿಸಿತು. ಧೋನಿ ಅವರ ಉತ್ಸಾಹ, ಬದ್ದತೆಯನ್ನು ಗಮನಿಸಿದ ಮಾಜಿ ಕ್ರಿಕೆಟಿಗರು, ಭಾರತದ ಹೆಮ್ಮೆಯ ದಿಗ್ಗಜನನ್ನು ಕೊಂಡಾಡಿದ್ದಾರೆ.
"ಧೋನಿ ಒಬ್ಬ ಜನಪ್ರಿಯ ಕ್ಯಾಪ್ಟನ್. ಪ್ರಸ್ತುತ ತಮ್ಮ ನಾಯಕತ್ವವನ್ನು ತೊರೆದಿದ್ದರೂ, ಕ್ಯಾಪ್ಟನ್ನಂತೆಯೇ ಇಂದಿಗೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎಂಎಸ್ ಧೋನಿ ಯಶಸ್ವಿ ನಾಯಕ. ಅವರ ಮಿಂಚಿನ ಸ್ಟಂಪಿಂಗ್‌ಗಳು ಮತ್ತು ಸಿಕ್ಸ್ ಹಿಟ್ಟಿಂಗ್ ಸಾಮರ್ಥ್ಯ ಇನ್ನೂ ಹಾಗೆಯೇ ಉಳಿದಿದೆ. ಅದರಲ್ಲಿ ಕಿಂಚಿತ್ತು ಬದಲಾವಣೆ ಕಂಡುಬಂದಿಲ್ಲ. ಧೋನಿ ಎಂದಿಗಿಂತಲೂ ಹೆಚ್ಚು ಫಿಟ್ ಆಗಿ ಕಾಣುತ್ತಿದ್ದಾರೆ ಮತ್ತು ಅವರು ಐಪಿಎಲ್ನಲ್ಲಿ ಇನ್ನೂ ಐದು ವರ್ಷಗಳ ಕಾಲ ಆಡುವುದನ್ನು ಮುಂದುವರಿಸುವುದು ಖಚಿತ" ಎಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯಡು ಭವಿಷ್ಯ ನುಡಿದರು,(ಏಜೆನ್ಸೀಸ್).