

MS Dhoni:ಇದೇ ಮಾರ್ಚ್ 22ರಿಂದ ಶುರುವಾಗಲಿರುವ ಐಪಿಎಲ್ 18ನೇ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದೆ. 10 ಬಲಿಷ್ಠ ತಂಡಗಳ ನಡುವಿನ ರೋಚಕ ಪೈಪೋಟಿ ಕಣ್ತುಂಬಿಕೊಳ್ಳಲು ತೀವ್ರ ಕುತೂಹಲ, ಕಾತರ ಹೊರಹಾಕಿರುವ ಕ್ರಿಕೆಟ್ ಅಭಿಮಾನಿಗಳು, ಶುಭಾರಂಭ ಪಂದ್ಯದಲ್ಲಿ ಸೆಣಸಾಡಲಿರುವ ಆರ್ಸಿಬಿ ಮತ್ತು ಕೋಲ್ಕತ ನೈಟ್ ರೈಡರ್ಸ್ ನಡುವಿನ ಪಂದ್ಯ ವೀಕ್ಷಣೆಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ ಎಂದೇ ಹೇಳಬಹುದು.
ಈಗಾಗಲೇ ಎಲ್ಲಾ ತಂಡಗಳು ಮೈದಾನದಲ್ಲಿ ಅಭ್ಯಾಸವನ್ನು ಪ್ರಾರಂಭಿಸಿವೆ. 10 ತಂಡಗಳ ಪೈಕಿ ಐದು ಬಾರಿ ಐಪಿಎಲ್ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಭ್ಯಾಸದಲ್ಲಿ ತೊಡಗಿದೆ. ಸಿಎಸ್‌ಕೆ ಎಂಬ ಹೆಸರು ಕೇಳಿದೊಡನೆ ಮೊದಲಿಗೆ ನೆನಪಾಗುವ ಹೆಸರು ಒಂದೇ, ಅದು ಮಹೇಂದ್ರ ಸಿಂಗ್ ಧೋನಿ. ಯೆಲ್ಲೋ ಆರ್ಮಿಯ ಮಾಜಿ ಕ್ಯಾಪ್ಟನ್, ದಿಗ್ಗಜ ಕ್ರಿಕೆಟಿಗ ಮತ್ತೊಂದು ಆವೃತ್ತಿ ಚೆನ್ನೈ ಪರ ಆಡುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಮೊನ್ನೆಯಷ್ಟೇ ಚೆನ್ನೈಗೆ ಭಾರೀ ಭದ್ರೆತೆಯಲ್ಲಿ ಬಂದಿಳಿದ ಕ್ಯಾಪ್ಟನ್ ಕೂಲ್, ಹೆಚ್ಚು ಸಮಯ ವ್ಯರ್ಥ ಮಾಡದೆ ಮೈದಾನಕ್ಕಿಳಿದು ಅಭ್ಯಾಸ ಶುರು ಮಾಡಿದ್ದಾರೆ. ಚಿರ ಯುವಕನಂತೆ ಕ್ರೀಡಾಂಗಣದಲ್ಲಿ ಕಸರತ್ತು ನಡೆಸುತ್ತಿರುವ ಮಾಹಿ, 43ನೇ ವಯಸ್ಸಿನಲ್ಲಿಯೂ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ತೋರಿದ ಸಿಕ್ಸರ್ ಪ್ರದರ್ಶನವನ್ನೂ ಇಂದಿನ ಅಭ್ಯಾಸದಲ್ಲಿಯೂ ಪ್ರದರ್ಶಿಸಿದ್ದಾರೆ. ಅದಕ್ಕೆ ತಂಡ ಹಂಚಿಕೊಂಡಿರುವ ಈ ವಿಡಿಯೋ ಸಾಕ್ಷಿ.
ಇಡೀ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರೆಲ್ಲರೂ ಮೈದಾನಕ್ಕಿಳಿದು ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಈ ಸಾಲಿನಲ್ಲಿ ಅಭಿಮಾನಿಗಳ ಗಮನವನ್ನು ಮತ್ತೊಮ್ಮೆ ಸೆಳೆದಿರುವ 'ಕ್ಯಾಪ್ಟನ್ ಕೂಲ್', ಅಭ್ಯಾಸದಲ್ಲಿಯೂ ಸಿಕ್ಸರ್ಗಳ ಸುರಿಮಳೆಯನ್ನು ಹರಿಸಿದ್ದಾರೆ. ಇದನ್ನು ನೋಡಿದ ಧೋನಿ ಅಭಿಮಾನಿಗಳು ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಆರು ವರ್ಷಗಳ ಬಳಿಕ ಮತ್ತೆ ಚೆನ್ನೈಗೆ ಹಿಂತಿರುಗಿರುವ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್, ಬ್ಯಾಟರ್ಗಳ ಮೇಲೆ ತಮ್ಮ ಬೌಲಿಂಗ್ ಚಳಕವನ್ನು ಪ್ರದರ್ಶಿಸಿದ್ದಾರೆ.
2025ರ ಐಪಿಎಲ್ ಹರಾಜಿನಲ್ಲಿ 9.75 ಕೋಟಿ ರೂ.ಗೆ ಸಹಿ ಹಾಕಿದ ಅಶ್ವಿನ್, ತಮ್ಮ ಐಪಿಎಲ್ ವೃತ್ತಿಜೀವನವನ್ನು 2009ರಲ್ಲಿ ಇದೇ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಪ್ರಾರಂಭಿಸಿದ್ದರು. ಈ ಮಧ್ಯೆ ಸಿಎಸ್‌ಕೆ ಎರಡು ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಆದ ಕಾರಣ, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿ ಆಡಿದರು. ಆ ನಂತರ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಮಿಂಚಿದರು. ಇದೀಗ ಆರು ವರ್ಷಗಳ ಬಳಿಕ ಮತ್ತೇ ಸಿಎಸ್‌ಕೆ ಪರ ಆಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ,(ಏಜೆನ್ಸೀಸ್).