

ನವದೆಹಲಿ: ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರನ್ನು ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರು ಕೊಂಡಾಡಿದ್ದಾರೆ.
ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಹೊಸ ಆಯಾಮವನ್ನು ತಂದು ಕೊಟ್ಟ ಧೋನಿ ಅವರನ್ನು ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು ಎಂದು ರವಿಶಾಸ್ತ್ರಿ ಪರಿಗಣಿಸಿದ್ದಾರೆ.
ಈ ವ್ಯಕ್ತಿ (ಧೋನಿ) ಯಾವುದರಲ್ಲೂ ಎರಡನೇಯವ ಎಂಬ ಮಾತೇ ಇಲ್ಲ. ಆತ ಎಲ್ಲಿಂದ ಬಂದರೋ ಅಲ್ಲಿಂದ ಕ್ರಿಕೆಟ್ ಅನ್ನು ಎಲ್ಲ ಸಮಯದಲ್ಲೂ ಬದಲಾಯಿಸಿದ್ದಾರೆ. ಅವರ ಬ್ಯೂಟಿ ಏನೆಂದರೆ ಎಲ್ಲ ಮಾದರಿಯ ಕ್ರಿಕೆಟ್ನಲ್ಲೂ ಬದಲಾವಣೆಯನ್ನು ತಂದರು. ಟಿ20 ವಿಶ್ವಕಪ್, ಅನೇಕ ಐಪಿಎಲ್ ಕಿರೀಟವನ್ನು ಜಯಗಳಿಸಿದರು. ಏಕದಿನ ವಿಶ್ವಕಪ್ ಗೆದ್ದುಕೊಟ್ಟರು. ಟೆಸ್ಟ್ ಕ್ರಿಕೆಟ್ನಲ್ಲಿ ದೇಶವನ್ನು ನಂಬರ್ ಒನ್ ಸ್ಥಾನಕ್ಕೆ ತೆಗೆದುಕೊಂಡು ಹೋದರು ಎಂದು ರವಿಶಾಸ್ತ್ರಿ ಶ್ಲಾಘಿಸಿದ್ದಾರೆ.
ಓರ್ವ ವಿಕೆಟ್ ಕೀಪರ್ ಆಗಿ ಅನೇಕ ಬ್ಯಾಟ್ಸ್ಮನ್ಗಳಿಗೆ ಅವರು ಸಿಂಹಸ್ವಪ್ನವಾಗಿದ್ದರು. ತುಂಬಾ ಸ್ಟಂಪಿಂಗ್ ಮತ್ತು ರನೌಟ್ ಮಾಡಿರುವ ಅವರ ಕೈಗಳು ಪಿಕ್ಪಾಕೆಟ್ಗಿಂತಲೂ ವೇಗವಾಗಿದೆ ಎಂದು ರವಿಶಾಸ್ತ್ರಿಯವರು ಬಣ್ಣಿಸಿದ್ದಾರೆ.
ಅಂದಹಾಗೆ ಧೋನಿ 2014ರಲ್ಲೇ ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು. ನಿನ್ನೆ ಎಲ್ಲರೂ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವಾಗಲೇ ಧೋನಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.
ಧೋನಿ 350 ಏಕದಿನ ಪಂದ್ಯ 98 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲಿ 10 ಶತಕ ಹಾಗೂ 73 ಅರ್ಧಶತಕಗಳೊಂದಿಗೆ 50.57 ಸರಾಸರಿಯಲ್ಲಿ 10,773 ರನ್ ಗಳಿಸಿದ್ದಾರೆ. ಟಿ20ಯಲ್ಲಿ 2 ಅರ್ಧಶತಕಗಳೊಂದಿಗೆ 37.60 ರನ್ ಸರಾಸರಿಯಲ್ಲಿ 1,617 ರನ್ ಕಲೆ ಹಾಕಿದ್ದಾರೆ. (ಏಜೆನ್ಸೀಸ್)