

ದುಬೈ: ಭಾರತ ತಂಡದ ಮಾಜಿ ನಾಯಕನೂ ಆಗಿರುವ ಎಂಎಸ್ ಧೋನಿ ಐಪಿಎಲ್‌ನಲ್ಲಿ ಹಲವು ದಾಖಲೆಗಳ ಒಡೆಯನಾಗಿದ್ದಾರೆ. ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯವಾಡಿದ ಮೊದಲ ಆಟಗಾರ ಎನಿಸಿಕೊಂಡರು. ಧೋನಿ ಸನ್‌ರೈಸರ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ 194 ಪಂದ್ಯ ಪೂರೈಸಿದರು. ಇದು ಸಿಎಸ್‌ಕೆ ಪರ 164ನೇ ಪಂದ್ಯ ಎನಿಸಿಕೊಂಡಿತು. 193 ಪಂದ್ಯಗಳನ್ನಾಡಿರುವ ಸುರೇಶ್ ರೈನಾ ಹೆಸರಿನಲ್ಲಿದ್ದ ದಾಖಲೆಯನ್ನು ಧೋನಿ ಹಿಂದಿಕ್ಕಿದರು. 11ನೇ ಆವೃತ್ತಿಗಳಲ್ಲಿ ಸಿಎಸ್‌ಕೆ ತಂಡಕ್ಕೆ ಧೋನಿ ಸಾರಥ್ಯ ವಹಿಸಿದ್ದಾರೆ. ಜತೆಗೆ ಎರಡು ವರ್ಷಗಳ ಕಾಲ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ನಾಯಕನಾಗಿದ್ದರು. ತಮ್ಮ ದಾಖಲೆ ಹಿಂದಿಕ್ಕಿದ ಧೋನಿ ಅವರಿಗೆ ಸುರೇಶ್ ರೈನಾ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
ಇದನ್ನೂ ಓದಿ:ಇವರು ಐಪಿಎಲ್ ತಂಡಗಳಲ್ಲಿ ಇರುವ ಏಕೈಕ ಮಹಿಳೆ!
2013ರಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡವನ್ನು 2 ವರ್ಷಗಳ ಕಾಲ (2016, 2017) ಅಮಾನತುಗೊಳಿಸಲಾಗಿತ್ತು. ಈ ವೇಳೆ ಧೋನಿ 30 ಪಂದ್ಯಗಳನ್ನು ಪುಣೆ ತಂಡ ಪ್ರತಿನಿಧಿಸಿದ್ದರು. ಪ್ರಸಕ್ತ ಐಪಿಎಲ್‌ನಿಂದ ಸುರೇಶ್ ರೈನಾ ಹೊರಗುಳಿದಿದ್ದಾರೆ. ಮೂರು ಭಾರಿ ಟ್ರೋಫಿ ಜಯಿಸುವ ಮೂಲಕ ಧೋನಿ ಐಪಿಎಲ್‌ನಲ್ಲಿ 2ನೇ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಧೋನಿ ಸಾರಥ್ಯದಲ್ಲಿ ಸಿಎಸ್‌ಕೆ 2010, 2011 ಹಾಗೂ 2018ರಲ್ಲಿ ಟ್ರೋಫಿ ಜಯಿಸಿತ್ತು. ಧೋನಿ ಸಾರಥ್ಯದಲ್ಲೇ ಸಿಎಸ್‌ಕೆ 8 ಬಾರಿ ಫೈನಲ್ ಪ್ರವೇಶಿಸಿದೆ. ವೈಯಕ್ತಿಕವಾಗಿ ಧೋನಿ 9 ಫೈನಲ್ಸ್ ಆಡಿದ್ದಾರೆ. 2017ರಲ್ಲಿ ಧೋನಿ ಒಳಗೊಂಡ ಸ್ಟೀವನ್ ಸ್ಮಿತ್ ಸಾರಥ್ಯದ ಪುಣೆ ತಂಡ ಫೈನಲ್‌ಗೇರಿಸಿತ್ತು.
ಒಂದೇ ಫ್ರಾಂಚೈಸಿ ಪರ ಅತಿಹೆಚ್ಚು ಪಂದ್ಯಗಳನ್ನಾಡಿರುವ ದಾಖಲೆ ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಹೆಸರಿಗಿದೆ. ಇದುವರೆಗೂ ಅವರು 180 ಪಂದ್ಯಗಳನ್ನಾಡಿದ್ದಾರೆ.