

ದುಬೈ: ಐಪಿಎಲ್ ಎಂದರೆ ಪುರುಷರ ಕ್ರಿಕೆಟ್‌ನ ಶ್ರೀಮಂತ ಟೂರ್ನಿ. ಇಲ್ಲಿ ಪುರುಷರದ್ದೇ ದರ್ಬಾರ್. ಕೆಲ ತಂಡಗಳ ಒಡೆತನದಲ್ಲಿ ಮಹಿಳೆಯರ ಸಹಭಾಗಿತ್ವ ಇರುವುದನ್ನು ಬಿಟ್ಟರೆ ಎಲ್ಲ ತಂಡಗಳ ಸಿಬ್ಬಂದಿ ವರ್ಗದಲ್ಲೂ ಪುರುಷರದ್ದೇ ಪ್ರಾಬಲ್ಯ. ಇದರ ನಡುವೆ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಮಹಿಳಾ ಪ್ರತಿನಿಧ್ಯಕ್ಕೆ ಅವಕಾಶ ಲಭಿಸಿದೆ. ಇವರು ಐಪಿಎಲ್ ತಂಡಗಳ ಸಿಬ್ಬಂದಿ ಬಳಗದಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ. ಅವರೇ ರಾಜಸ್ಥಾನ ರಾಯಲ್ಸ್ ತಂಡದ ಮಹಿಳಾ ಫಿಸಿಯೋ ಅನುಜಾ ದಲ್ವಿ.
34 ವರ್ಷದ ಅನುಜಾ ದಲ್ವಿ ಅವರು ಐಪಿಎಲ್ ಟೂರ್ನಿಯಲ್ಲಿರುವ ಏಕೈಕ ಮಹಿಳಾ ಫಿಸಿಯೋ ಆಗಿದ್ದಾರೆ. ಜತೆಗೆ ರಾಜಸ್ಥಾನ ರಾಯಲ್ಸ್ ತಂಡದ ಕೋವಿಡ್-19 ಟಾಸ್ಕ್ ಫೋರ್ಸ್ ಮೇಲ್ವಿಚಾರಣೆಯನ್ನೂ ವಹಿಸಿಕೊಂಡಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲೂ (ಎನ್‌ಸಿಎ) ಈ ಹಿಂದೆ ಕಾರ್ಯನಿರ್ವಹಿಸಿರುವ ಅನುಜಾ ದಲ್ವಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಜತೆಗೂ ಕೆಲ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಮುಂಬೈ ಮೂಲದವರಾದ ಅನುಜಾ ದಲ್ವಿ, ಐಪಿಎಲ್ ಸವಾಲನ್ನು ಆನಂದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ‘ನಾನು ಕಳೆದೊಂದು ದಶಕದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳ ಜತೆಗೆ ಕಾರ್ಯನಿರ್ವಹಿಸಿದ್ದೇನೆ. ಅದಕ್ಕೆ ಹೋಲಿಸಿದರೆ ಐಪಿಎಲ್‌ನ ಸವಾಲು ಇನ್ನಷ್ಟು ಕಠಿಣವಾಗಿದೆ. ಐಪಿಎಲ್ ಟೂರ್ನಿ ವಿಶ್ವ ಟಿ20 ಕ್ರಿಕೆಟ್‌ನ ಉತ್ತುಂಗದಲ್ಲಿದೆ. ಇದರಲ್ಲಿ ಕೆಲಸ ನಿರ್ವಹಿಸುತ್ತಿರುವುದು ನನ್ನ ಸೌಭಾಗ್ಯ’ ಎಂದು ಅನುಜಾ ದಲ್ವಿ ತಿಳಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಫಿಸಿಯೋ ಜಾನ್ ಗ್ಲೋಸ್ಟರ್ ಅವರ ವಿದ್ಯಾರ್ಥಿನಿಯೂ ಆಗಿರುವ ಅನುಜಾ ದಲ್ವಿ, ದಕ್ಷಿಣ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದಿಂದ ಸ್ಪೋರ್ಟ್ಸ್ ಫಿಸಿಯೋಥೆರಪಿ ಪದವಿ ಪಡೆದುಕೊಂಡಿದ್ದಾರೆ. ಮುಂಬೈನ ಕೆಇಎಂ ಆಸ್ಪತ್ರೆಯ ಜಿಎಸ್ ಮೆಡಿಕಲ್ ಕಾಲೇಜಿನಲ್ಲೂ ಅಭ್ಯಾಸ ಮಾಡಿದ್ದಾರೆ. ಐಪಿಎಲ್ ಟೂರ್ನಿಗೆ ಮುನ್ನ ಅವರು ಪ್ರೊ ಕಬಡ್ಡಿ ಲೀಗ್‌ನಲ್ಲೂ ಕಾರ್ಯನಿರ್ವಹಿಸಿದ್ದರು. ಅವರ ಪತಿ ನಿರಂಜನ್ ಪಂಡಿತ್ ಕೂಡ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಖ್ಯಾತ ವೈದ್ಯರಾಗಿದ್ದಾರೆ.