ವಿರಾಟ್​ ಕೊಹ್ಲಿ, ಧೋನಿ, ರೋಹಿತ್​ ಶರ್ಮಾ....: ಈ ಮೂವರ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಪಾರ್ಥಿವ್​ ಪಟೇಲ್​

Dhoni 28 June 20
Published on

ಮುಂಬೈ: ಭಾರತ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​ ಪಾರ್ಥಿವ್​ ಪಟೇಲ್​ ಅವರು ಎಂ.ಎಸ್​.ಧೋನಿ, ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರ ನಾಯಕತ್ವದಡಿ ಆಡಿದವರು. ನಾಯಕರಾಗಿ ಈ ಮೂವರ ನಡುವಿನ ವ್ಯತ್ಯಾಸವನ್ನು ಇದೀಗ ಅವರು ಹೇಳಿದ್ದಾರೆ.

ಏಕದಿನ ಪಂದ್ಯಾವಳಿಗಳು, ಐಪಿಎಲ್​​ಗಳಲ್ಲಿ ಆಡಿರುವ ಪಾರ್ಥಿವ್​ ಪಟೇಲ್​ ಅವರು, ಎಂ.ಎಸ್​.ಧೋನಿ, ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರು ನಾಯಕತ್ವನ್ನು ನಿಭಾಯಿಸುವ ಬಗೆಯನ್ನು ಯೂಟ್ಯೂಬ್​ ಚಾನಲ್​ವೊಂದರ ಮೂಲಕ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ಬಗ್ಗೆ ಮಾತನಾಡಿರುವ ಅವರು, ವಿರಾಟ್​ ಕೊಹ್ಲಿಯವರದ್ದು ಆಕ್ರಮಣಶೀಲ ಮನೋಭಾವ. ಅವರು ನಾಯಕತ್ವ ನಿಭಾಯಿಸುವ ಬಗೆಯೇ ವಿಭಿನ್ನ. ಪ್ರತಿ ಸಂದರ್ಭದಲ್ಲಿಯೂ ತಾವೇ ಮುಂದೆ ಇರಲು ಇಚ್ಛಿಸುತ್ತಾರೆ. ಸದಾ ಅಗ್ರೆಸ್ಸಿವ್ ಆಗಿಯೇ ಇದ್ದು, ತಂಡದಲ್ಲಿ ತಾನೇ ಮೊದಲಿಗನಾಗಿದ್ದುಕೊಂಡು ಆಟಗಾರರನ್ನು ನಿಭಾಯಿಸುತ್ತಾರೆ. ಅದು ಅವರಿಗೆ ಕರೆಕ್ಟ್​ ಆಗಿ ಸೂಟ್​ ಆಗುತ್ತದೆ ಎಂದು ಹೇಳಿದ್ದಾರೆ.

ಧೋನಿ ಮತ್ತು ರೋಹಿತ್​ ಡ್ರೆಸ್ಸಿಂಗ್​ ರೂಂ ಶಾಂತಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ ಕೊಹ್ಲಿ ಹಾಗಲ್ಲ. ಅಲ್ಲೂ ಕೂಡ ಎಲ್ಲರೂ ತಮ್ಮ ನಿಯಂತ್ರಣದಲ್ಲೆ ಇರಬೇಕು ಎಂದು ಇಚ್ಛಿಸುತ್ತಾರೆ ಎಂದಿದ್ದಾರೆ.

ಪಾರ್ಥಿವ್​ ಪಟೇಲ್​ ಅವರು 2008 ರಿಂದ 2010ರವರೆಗೆ ಐಪಿಎಲ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಮೂರು ಸೀಸನ್​ಗಳನ್ನು, ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಡಿ ಆಡಿದ್ದಾರೆ. ಹಾಗೇ 2015ರಿಂದ 2017ರವರೆಗೆ ಮೂರು ಸೀಸನ್​ಗಳಲ್ಲಿ ಮುಂಬೈ ಇಂಡಿಯನ್ಸ್​ ತಂಡದಲ್ಲಿ ರೋಹಿತ್​ ಶರ್ಮಾ ಅವರ ನಾಯಕತ್ವದಡಿ ಕ್ರಿಕೆಟ್​ ಆಡಿದ್ದಾರೆ. ಅದಾದ ಬಳಿಕ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ಸೇರಿಕೊಂಡಿದ್ದಾರೆ.

ಎಂ.ಎಸ್​.ಧೋನಿ ಪ್ರತಿ ಆಟಗಾರನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅದನ್ನು ಗುರುತಿಸಿ, ಹೊರಗೆ ತೆಗೆಯುತ್ತಾರೆ. ಯಾವುದೇ ಆಟಗಾರ ಇರಲಿ, ಅವನ ಸ್ವಂತ ಶೈಲಿಯಲ್ಲಿಯೇ ಆಡಲು, ತಾನೇನು? ತನ್ನ ಸಾಮರ್ಥ್ಯವೇನು ಎಂಬುದನ್ನು ತೆರೆದಿಡಲು ಸಂಪೂರ್ಣ ಅವಕಾಶ ಕೊಡುತ್ತಾರೆ ಎಂದು ಪಾರ್ಥಿವ್​ ಹೇಳಿದ್ದಾರೆ.

ಇನ್ನು ಐಪಿಎಲ್​​ನ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್​ ಶರ್ಮಾ ಬಗ್ಗೆ ಮಾತನಾಡಿದ ಪಾರ್ಥಿವ್​ ಪಟೇಲ್​, ರೋಹಿತ್​ ಅವರು ತುಂಬ ಅಚ್ಚುಕಟ್ಟಾಗಿ ಯೋಜನೆಗಳನ್ನು ರೂಪಿಸುತ್ತಾರೆ. ಅಂದಿನ ಆಟದಲ್ಲಿ ಯಾವ ಆಟಗಾರನ ಪಾತ್ರವೇನು ಎಂಬುದನ್ನು ಚೆನ್ನಾಗಿ ವಿವರಿಸುತ್ತಾರೆ. ತಂಡವನ್ನು ಉತ್ತೇಜಿಸಿ, ಆಡಿಸುತ್ತಾರೆ. ತಂಡ ನಿರ್ವಹಣೆಯಲ್ಲಿ ಧೋನಿ ಮತ್ತು ರೋಹಿತ್​ ಶರ್ಮಾ ನಿಜಕ್ಕೂ ಉತ್ತಮರು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net