VIDEO |ಇವೊಯಿನ್ ಮಾರ್ಗನ್ ಬಿರುಸಿನ ಶತಕ

morgan2
Published on

ಸೌಥಾಂಪ್ಟನ್: ನಾಯಕ ಇವೊಯಿನ್ ಮಾರ್ಗನ್ (106 ರನ್, 84 ಎಸೆತ, 15 ಬೌಂಡರಿ, 4 ಸಿಕ್ಸರ್) ಬಿರುಸಿನ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಪ್ರವಾಸಿ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ. ಈ ಮೂಲಕ ಸರಣಿ ಕ್ಲೀನ್‌ಸ್ವೀಪ್ ಸಾಧಿಸುವತ್ತ ಆತಿಥೇಯ ಇಂಗ್ಲೆಂಡ್ ತಂಡ ಮುನ್ನಡೆದಿದೆ.

ರೋಸ್ ಬೌಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ, 49.5 ಓವರ್‌ಗಳಲ್ಲಿ 328 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ತಂಡ ಆರಂಭದಲ್ಲಿ 44 ರನ್‌ಗೆ 3 ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತ್ತು. ಆಗ ಜತೆಗೂಡಿದ ಮಾರ್ಗನ್ ಮತ್ತು ಯುವ ಬ್ಯಾಟ್ಸ್‌ಮನ್ ಟಾಮ್ ಬ್ಯಾಂಟಮ್ (58) ನಡುವಿನ ಬಿರುಸಿನ 146 ರನ್ ಜತೆಯಾಟದಿಂದ ಇಂಗ್ಲೆಂಡ್ ತಂಡ ಚೇತರಿಕೆ ಕಂಡಿತು.

ಮಾರ್ಗನ್ 78 ಎಸೆತಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 14ನೇ ಶತಕ ಪೂರೈಸಿದರು. ಮಾರ್ಗನ್ ನಿರ್ಗಮಿಸಿದ ಬಳಿಕ ಆಲ್ರೌಂಡರ್ ಡೇವಿಡ್ ವಿಲ್ಲಿ (51 ರನ್, 42 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ಶ್ರಮಿಸಿದರು. ಅವರಿಗೆ ಟಾಮ್ ಕರ‌್ರನ್ (38*) ಉತ್ತಮ ಸಾಥ್ ನೀಡಿದರು. ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಸುಲಭ ಗೆಲುವು ದಾಖಲಿಸಿತ್ತು.

ಇಂಗ್ಲೆಂಡ್: 49.5 ಓವರ್‌ಗಳಲ್ಲಿ 328 (ಜೇಸನ್ ರಾಯ್ 1, ಬೇರ್‌ಸ್ಟೋ 4, ಜೇಮ್ಸ್ ವಿನ್ಸ್ 16, ಮಾರ್ಗನ್ 106, ಬ್ಯಾಂಟಮ್ 58, ಬಿಲ್ಲಿಂಗ್ಸ್ 19, ಮೊಯಿನ್ ಅಲಿ 1, ಡೇವಿಡ್ ವಿಲ್ಲಿ 51, ಟಾಮ್ ಕರ‌್ರನ್ 38*, ಯಂಗ್ 53ಕ್ಕೆ 3, ಕ್ಯಾಂಪರ್ 68ಕ್ಕೆ 2, ಲಿಟಲ್ 62ಕ್ಕೆ 2, ಡೆಲಾನಿ 29ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net