ಕೆಲವೇ ತಿಂಗಳಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದೆ ಭಾರತ-ಪಾಕ್​; ಹೇಗೆ ಗೊತ್ತಾ?

India Pakistan
Published on

ನವದೆಹಲಿ: ಫೆಬ್ರವರಿ 23ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಹೈವೋಲ್ಟೇಜ್ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ಆತಿಥೇಯರಿಗೆ ಭಾರೀ ಮುಖಭಂಗವಾಗಿದೆ. ಕಳಪೆ ಪ್ರದರ್ಶನದಿಂದಾಗಿ ಪಾಕಿಸ್ತಾನ ತನ್ನ ಅಭಿಯಾನವನ್ನು ನೀರಸವಾಗಿ ಮುಗಿಸಿದ್ದು, ಭಾರತ- ಪಾಕ್  (Indo-Pak) ನಡುವಿನ ಮತ್ತೊಂದು ಮುಖಾಮುಖಿಯನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯನ್ನುಂಟು ಮಾಡಿದೆ.

ಭಾರತ ಪಾಕ್ (Indo-Pak) ಹೈವೋಲ್ಟೇಜ್ ಪಂದ್ಯವನ್ನು ಎದುರು ನೋಡುತ್ತಿರುವು ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಲಭಿಸಿದ್ದು, ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಹಾಗೂ ಪಾಕಿಸ್ತಾನ ಕನಿಷ್ಠ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಕ್ರಿಕ್​ಬಜ್​ ವರದಿ ಮಾಡಿದೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ನಡೆಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, 8 ತಂಡಗಳ ಈ ಪಂದ್ಯಾವಳಿಯು ಸೆಪ್ಟೆಂಬರ್ ಎರಡನೇ ವಾರದಿಂದ ನಾಲ್ಕನೇ ವಾರದವರೆಗೆ ನಡೆಯಲಿದೆ ಎಂದು ವರದಿಯಾಗಿದೆ. ಆ ಪ್ರಕಾರ ಈ ಹೈವೋಲ್ಟೇಜ್ ಕದನದಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ.

Ind vs Pak

ಇದಲ್ಲದೆ 2026ರಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಏಷ್ಯಾಕಪ್​​ಅನ್ನು ಸಹ ಅದೇ ಸ್ವರೂಪದಲ್ಲಿ ಆಡಲಾಗುವುದು. ಹಾಗೆಯೇ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳನ್ನು ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ನಿರೀಕ್ಷೆಯಂತೆ, ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯುವುದು ಖಚಿತ. ಅಂತಹ ಪರಿಸ್ಥಿತಿಯಲ್ಲಿ, ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲ್ಲಿದೆ.

ಎರಡೂ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದರೆ, ಸೂಪರ್-4 ಹಂತದಲ್ಲೂ ಪರಸ್ಪರ ಎದುರಾಗಬಹುದು. ಇಲ್ಲಿಂದ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಆ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೂಪರ್-4 ನಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಫೈನಲ್‌ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗಲಿವೆ.  ಈ ಬಾರಿ ಟೂರ್ನಿಯು ತಟಸ್ಥ ಸ್ಥಳದಲ್ಲಿ ನಡೆಯಲಿದ್ದು, 2027 ರ ಆವೃತ್ತಿಯು ಬಾಂಗ್ಲಾದೇಶದಲ್ಲಿ ನಡೆಯಲಿದೆ. 2029ರ ಆವೃತ್ತಿಯು ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದ್ದು, 2031ರ ಆವೃತ್ತಿಯು ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. 

https://www.vijayavani.net/champions-trophy-2025-more-shame-for-pakistan-after-match-vs-bangladesh-called-off-due-to-rain

https://www.vijayavani.net/delhi-capitals-rope-in-kevin-pietersen-as-mentor-ahead-of-ipl-2025-rcb

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net