

ನವದೆಹಲಿ: ಅನುಭವಿ ವೇಗಿ ಮೊಹಮದ್ ಶಮಿ ಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವುದಕ್ಕೆ ಮುನ್ನ ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡದ ಪರ ಒಂದು ಪಂದ್ಯವನ್ನು ಆಡುವ ಸಾಧ್ಯತೆ ಇದೆ. ಬಂಗಾಳ ತಂಡ ಅಕ್ಟೋಬರ್ 11ರಿಂದ 14ರವರೆಗೆ ಉತ್ತರ ಪ್ರದೇಶ ಮತ್ತು ಅಕ್ಟೋಬರ್ 18ರಿಂದ 21ರವರೆಗೆ ಬಿಹಾರ ವಿರುದ್ಧ ಮೊದಲ 2 ಪಂದ್ಯಗಳನ್ನು ಆಡಲಿದೆ. ಈ ಪೈಕಿ ಒಂದು ಪಂದ್ಯದಲ್ಲಿ ಶಮಿ ಆಡುವ ನಿರೀಕ್ಷೆ ಇದೆ. ಇವೆರಡು ಪಂದ್ಯಗಳ ನಡುವೆ ಕೇವಲ 2 ದಿನಗಳ ಅಂತರವಿರುವುದರಿಂದ ಶಮಿ ಎರಡರಲ್ಲೂ ಆಡುವ ಸಾಧ್ಯತೆ ಇಲ್ಲ.
ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 19ರಿಂದ ಬೆಂಗಳೂರಿನಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಪುಣೆ (ಅಕ್ಟೋಬರ್ 24-28) ಮತ್ತು ಮುಂಬೈ (ನವೆಂಬರ್ 1-5) ನಂತರದ 2 ಟೆಸ್ಟ್ ನಡೆಯಲಿದ್ದು, 34 ವರ್ಷದ ಶಮಿ ಈ ಪೈಕಿ ಒಂದರಲ್ಲಿ ಆಡುವ ಸಾಧ್ಯತೆ ಇದೆ. ವರ್ಷಾಂತ್ಯದ ಸವಾಲಿನ ಆಸ್ಟ್ರೆಲಿಯಾ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಶಮಿ ತವರಿನಲ್ಲಿ ಒಂದು ಟೆಸ್ಟ್ ಮಾತ್ರ ಆಡಲಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷದ ಅಕ್ಟೋಬರ್ 19ರಂದು ನಡೆದ ಏಕದಿನ ವಿಶ್ವಕಪ್ ಫೈನಲ್ ಬಳಿಕ ಶಮಿ ಒಂದೂ ಸ್ಪರ್ಧಾತ್ಮಕ ಪಂದ್ಯ ಆಡಿಲ್ಲ. ಕಳೆದ ಫೆಬ್ರವರಿಯಲ್ಲಿ ಬ್ರಿಟನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಸದ್ಯ ಬೆಂಗಳೂರಿನ ಎನ್ಸಿಎಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿದ್ದಾರೆ. ಮಹತ್ವದ ಆಸ್ಟ್ರೆಲಿಯಾ ಪ್ರವಾಸಕ್ಕೆ ಪ್ರಮುಖ ವೇಗಿಗಳಾದ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮದ್ ಸಿರಾಜ್ರನ್ನು ಫಿಟ್ ಆಗಿಡುವುದು ಭಾರತದ ಯೋಜನೆಯಾಗಿದೆ.