VIDEO | ಸ್ಕೋರ್ ಕೇಳಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಸಿರಾಜ್ ನೀಡಿದ ಉತ್ತರ ಏನು ಗೊತ್ತಾ?

siraj web
Published on

ಲೀಡ್ಸ್: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ನಿರ್ವಹಣೆ ತೋರಿದ ಬಳಿಕ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಎದುರಿಸಿದ್ದ ಟೀಮ್ ಇಂಡಿಯಾ ವೇಗಿ ಮೊಹಮದ್ ಸಿರಾಜ್‌ಗೆ ಇದೀಗ ಇಂಗ್ಲೆಂಡ್‌ನಲ್ಲೂ ಸ್ಥಳೀಯ ಪ್ರೇಕ್ಷಕರಿಂದ ಕಿರಿಕಿರಿ ಎದುರಾಗಿದೆ. ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನ ಸಿರಾಜ್ ಮೇಲೆ ಪ್ರೇಕ್ಷಕರ ಗ್ಯಾಲರಿಯಿಂದ ಚೆಂಡೊಂದು ತೂರಿ ಬಂದಿತ್ತು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೂ, ಟೀಮ್ ಇಂಡಿಯಾ ಅಧಿಕೃತ ದೂರು ದಾಖಲಿಸಿಲ್ಲ. ಇದೇ ವೇಳೆ ಸ್ಕೋರ್ ಕೇಳಿ ಛೇಡಿಸಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಸಿರಾಜ್ ದಿಟ್ಟ ಉತ್ತರವನ್ನೂ ನೀಡಿ ಸುದ್ದಿಯಾಗಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಕೇವಲ 78 ರನ್‌ಗೆ ಆಲೌಟ್ ಆಗಿತ್ತು. ಇದರಿಂದಾಗಿ ಭಾರತ ತಂಡದ ಆಟಗಾರರು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೊರತಾಗಿಯೂ ಮೊದಲ ದಿನವೇ ಫೀಲ್ಡಿಂಗ್‌ಗೂ ಇಳಿಯುವಂತಾಗಿತ್ತು. ಲಾರ್ಡ್ಸ್‌ನಲ್ಲಿ ಕಂಡ ಐತಿಹಾಸಿಕ ಗೆಲುವಿನ ಬಳಿಕ ಈ ನಿರ್ವಹಣೆ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಈ ಕೆಟ್ಟ ನಿರ್ವಹಣೆಗಾಗಿ ಭಾರತ ತಂಡದ ಕಾಲೆಳೆಯುವ ಸಲುವಾಗಿ ಮೊಹಮದ್ ಸಿರಾಜ್ ಬೌಂಡರಿ ಗೆರೆ ಬಳಿಕ ಫೀಲ್ಡಿಂಗ್ ಮಾಡುತ್ತಿದ್ದಾಗ ಇಂಗ್ಲೆಂಡ್ ಪ್ರೇಕ್ಷಕರು ‘ಸ್ಕೋರ್ ಎಷ್ಟಾಯಿತು’ ಎಂದು ಕೇಳಿ ಕಾಲೆಳೆಯುವ ಪ್ರಯತ್ನ ನಡೆಸಿದ್ದರು.

ಆಂಗ್ಲ ಪ್ರೇಕ್ಷಕರು ಸ್ಕೋರ್ ಕೇಳಿದ್ದಕ್ಕೆ ಪ್ರತಿಯಾಗಿ ಸಿರಾಜ್, ‘1-0’ ಎಂದು ಸನ್ನೆ ಮಾಡಿ ತೋರಿಸಿದ್ದರು. ಈ ಮೂಲಕ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ ಎಂಬುದನ್ನು ಉಲ್ಲೇಖಿಸಿ ಆಂಗ್ಲರಿಗೆ ತಿರುಗೇಟು ನೀಡಿದ್ದರು. ಈ ಮೂಲಕ ಬುಧವಾರದ ಕೆಟ್ಟ ನಿರ್ವಹಣೆಯ ನಡುವೆಯೂ ಸರಣಿಯಲ್ಲಿ ನಾವೇ ಪ್ರಾಬಲ್ಯ ಹೊಂದಿದ್ದೇವೆ ಎಂದು ಆಂಗ್ಲರಿಗೆ ದಿಟ್ಟ ಉತ್ತರ ನೀಡಿದ್ದರು. ಸರಣಿಯ 2ನೇ ಟೆಸ್ಟ್ ಗೆಲುವಿನಲ್ಲಿ ಸಿರಾಜ್ ಮಹತ್ವದ ಪಾತ್ರ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net