ಸಿರಾಜ್​ಗೆ ಈ ಅಡ್ಡಹೆಸರಿಟ್ಟಿದೆ ಇಂಗ್ಲೆಂಡ್​ ಟೀಮ್​... ಆಸಕ್ತಿಕರ ಮಾಹಿತಿ ಬಿಚ್ಚಿಟ್ಟ ಸ್ಟುವರ್ಟ್ ಬ್ರಾಡ್! Mohammed Siraj

Mohammed Siraj
Published on

Mohammed Siraj : ಟೀಮ್ ಇಂಡಿಯಾದ ಆಟಗಾರ ಮೊಹಮ್ಮದ್ ಸಿರಾಜ್ ಅವರಿಗೆ ಇಂಗ್ಲೆಂಡ್ ತಂಡವು ಒಂದು ಅಡ್ಡಹೆಸರನ್ನು ಇಟ್ಟಿದೆ. ಈ ವಿಚಾರವನ್ನು ಸ್ವತಃ ಇಂಗ್ಲೆಂಡ್​ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಅವರೇ ಬಹಿರಂಗಪಡಿಸಿದ್ದಾರೆ. ಆಂಗ್ಲ ಪಡೆ ವಿಶೇಷವಾಗಿ ಬೆನ್ ಡಕೆಟ್ ಅವರು ಟೀಮ್​ ಇಂಡಿಯಾ ವೇಗಿ ಸಿರಾಜ್ ಅವರನ್ನು 'ಮಿಸ್ಟರ್ ಆಂಗ್ರಿ' ಎಂದು ಕರೆಯುತ್ತಾರೆ ಎಂದು ಸ್ಟುವರ್ಟ್ ಬ್ರಾಡ್ ಬಹಿರಂಗಪಡಿಸಿದ್ದಾರೆ.

ಮೈದಾನದಲ್ಲಿ ಸಿರಾಜ್ ಅವರು ಆಕ್ರಮಣಕಾರಿಯಾಗಿ ವರ್ತಿಸುವ ಹಿನ್ನೆಲೆಯಲ್ಲಿ ಈ ಹೆಸರು ಬಂದಿದೆ ಎಂದು ಬ್ರಾಡ್​ ಹೇಳಿದ್ದಾರೆ. ಅಂದಹಾಗೆ, ಲಾರ್ಡ್ಸ್ ಟೆಸ್ಟ್‌ನಲ್ಲಿ ಬೆನ್​ ಡಕೆಟ್ ಅವರನ್ನು ಔಟ್ ಮಾಡಿದ ನಂತರ ಸಿರಾಜ್​​ ಅವರು ಕೋಪದಿಂದ ಸಂಭ್ರಮಾಚರಣೆ ಮಾಡಿ, ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ. 15 ರಷ್ಟು ದಂಡವನ್ನು ಸಹ ಪಾವತಿಸಬೇಕಾಯಿ.

ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಬ್ರಾಡ್, ಬೆನ್ ಡಕೆಟ್ ಅವರು ಸಿರಾಜ್‌ರನ್ನು ನೋಡಿ ಮುಗುಳ್ನಕ್ಕು, ಹಲೋ ಮಿಸ್ಟರ್ ಆ್ಯಂಗ್ರಿ, ಗುಡ್ ಮಾರ್ನಿಂಗ್ ಮಿಸ್ಟರ್ ಆ್ಯಂಗ್ರಿ, ಹೇಗಿದ್ದೀರಿ? ಎಂದು ಕೇಳಿದರು. ಇಬ್ಬರ ನಡುವೆ ಮೋಜಿನ ಸಂಭಾಷಣೆ ನಡೆಯಿತು. ಈ ಸರಣಿಯಲ್ಲಿ ಸಿರಾಜ್ ಅವರನ್ನು ನೋಡುವುದು ನನಗೆ ತುಂಬಾ ಇಷ್ಟ. ಅವರು ಎಲ್ಲೆಡೆ ಇದ್ದಾರೆ. ಅದು ವಿವಾದವಾಗಿರಬಹುದು ಅಥವಾ ವಿಕೆಟ್ ಆಗಿರಬಹುದು. ಅವರು ಯಾವಾಗಲೂ ದೂರದರ್ಶನ ಪರದೆಯ ಮೇಲೆ ಚಪ್ಪಾಳೆ ತಟ್ಟುತ್ತಾ ನಗುತ್ತಿರುತ್ತಾರೆ ಎಂದು ಬ್ರಾಡ್ ಹೇಳಿದರು.

ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಪರ ಸಿರಾಜ್ ಅದ್ಭುತ ಬೌಲಿಂಗ್ ಮಾಡಿದರು. ಅವರು 4 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದರು. ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್ ಮತ್ತು ಜಾಕೋಬ್ ಬೆಥೆಲ್ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್‌ಗೆ ಆಘಾತ ನೀಡಿದರು ಎಂದು ಬ್ರಾಡ್​ ತಿಳಿಸಿದರು.

ಮೂರನೇ ದಿನದಾಟದ ಅಂತ್ಯದಲ್ಲಿ ಸಾಯಿ ಸುದರ್ಶನ್ ಅವರು ಔಟಾದರು. ಪೆವಿಲಿಯನ್​ಗೆ ಹೋಗುವ ವೇಳೆ ಬೆನ್​ ಡಕೆಟ್ ಮತ್ತು ಸುದರ್ಶನ್​ ನಡುವೆ ಏನೋ ವಾಗ್ವಾದ ನಡೆಯಿತು. ಈ ವೇಳೆ ಓಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಮನಗೊಳಿಸಿದರು. ಸುದರ್ಶನ್ ಅವರು ಡಕೆಟ್ ಕಡೆಗೆ ತಿರುಗಿ ಕೋಪದಿಂದ ಪ್ರತಿಕ್ರಿಯಿಸಿದಾಗ ನನಗೆ ಆಶ್ಚರ್ಯವಾಯಿತು. ಏಕೆಂದರೆ, ಅದು ಅವರ ಸ್ವಭಾವಕ್ಕೆ ವಿರುದ್ಧವಾಗಿತ್ತು. ಆದರೆ ನನಗೆ ಅರ್ಥವಾಯಿತು. ನೀವು ನಿಮ್ಮ ದೇಶಕ್ಕಾಗಿ ಆಡುವಾಗ, ಆ ಜೆರ್ಸಿ ಹೆಮ್ಮೆ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಮೈದಾನದಲ್ಲಿ ಭಾವನೆಯನ್ನು ತೋರಿಸುವುದು ಒಳ್ಳೆಯದು ಎಂದು ನಾನು ಯಾವಾಗಲೂ ನಂಬುತ್ತೇನೆ. ಅದು ಆಟಕ್ಕೆ ಜೀವ ತುಂಬುತ್ತದೆ. ನನಗೂ ಆ ರೀತಿಯ ಆಟ ಇಷ್ಟ ಎಂದು ಸ್ಟುವರ್ಟ್​ ಬ್ರಾಡ್​ ಇದೇ ವೇಳೆ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net