ನಾನು ತುಂಬಾ ಬೇಸರಗೊಂಡಿದ್ದೆ, ಒಂದು ಹಂತದಲ್ಲಿ ಅದನ್ನು ಅರಗಿಸಿಕೊಳ್ಳಲು ಸಹ ಆಗಲಿಲ್ಲ: ಸಿರಾಜ್ ಅಚ್ಚರಿ ಹೇಳಿಕೆ​! Mohammed Siraj

Mohammed Siraj
Published on

Mohammed Siraj : ರಾಯಲ್​​​​ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಪರ ಏಳು ವರ್ಷಗಳ ಕಾಲ ಆಡಿದ್ದ ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಹೆಚ್ಚಿನ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಸಾಂದರ್ಭಿಕವಾಗಿ ಮಿಂಚಿನ ಪ್ರದರ್ಶನಗಳನ್ನು ನೀಡುತ್ತಿದ್ದ ಸಿರಾಜ್​, ಸ್ಥಿರವಾಗಿ ಪ್ರದರ್ಶನ ನೀಡಲಿಲ್ಲ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಪರವೂ ಯಾವುದೇ ಗಮನಾರ್ಹ ಪ್ರದರ್ಶನಗಳನ್ನು ನೀಡಿಲ್ಲ. ಇದರ ಪರಿಣಾಮವಾಗಿ, ಮೊಹಮ್ಮದ್​ ಸಿರಾಜ್ ಅವರನ್ನು 2025ನೇ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಂಗಳೂರು ತಂಡವು ಕೈಬಿಟ್ಟಿತು. ಬಳಿಕ ಗುಜರಾತ್ ಟೈಟಾನ್ಸ್ ಅವರನ್ನು ಖರೀದಿಸಿತು.

2025ರ ಚಾಂಪಿಯನ್ಸ್ ಟ್ರೋಫಿಗೂ ಭಾರತೀಯ ತಂಡಕ್ಕೆ ಸಿರಾಜ್​ ಅವರನ್ನು ಆಯ್ಕೆ ಮಾಡಲಿಲ್ಲ. ಇದರಿಂದ ಬಹಳ ಬೇಸರಗೊಂಡಿದ್ದ ಸಿರಾಜ್​ ಇದೀಗ ತಮ್ಮ ಬೌಲಿಂಗ್​ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಐಪಿಎಲ್​ ಅಂಗಳಕ್ಕೆ ಇಳಿದಿದ್ದು, ತಮ್ಮ ಮೊನೆಚಾದ ಬೌಲಿಂಗ್​ ದಾಳಿ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಭಾನುವಾರ (ಏಪ್ರಿಲ್​ 06) ರಾತ್ರಿ ಹೈದರಾಬಾದ್​ನ ಉಪ್ಪಲ್ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿರಾಜ್​ ಅವರು ವಿಶೇಷವಾಗಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಮತ್ತೊಮ್ಮೆ 'ಪಂದ್ಯದ ಆಟಗಾರ' ಪ್ರಶಸ್ತಿಯನ್ನು ಗೆದ್ದರು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮೊಹಮ್ಮದ್ ಸಿರಾಜ್ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಅವಕಾಶ ಸಿಗದಿರುವುದು ಮತ್ತು ಪ್ರಸ್ತುತ ಅವರ ಬೌಲಿಂಗ್​ ಪ್ರದರ್ಶನದ ಕುರಿತು ಮಾತನಾಡಿದರು. ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದಿದ್ದಕ್ಕಾಗಿ ನಾನು ತುಂಬಾ ಅಸಮಾಧಾನಗೊಂಡಿದ್ದೆ. ನನ್ನನ್ನು ಕೈಬಿಟ್ಟ ನಿರ್ಧಾರವನ್ನು ಒಂದು ಹಂತದಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಾದ ನಂತರ ನಾನು ತುಂಬಾ ಕಷ್ಟಪಟ್ಟೆ. ನಾನು ಉಪ್ಪಲ್​​ ಮೈದಾನದಲ್ಲಿ ಅನೇಕ ಪಂದ್ಯಗಳನ್ನು ಆಡಿದ್ದೇನೆ. ತವರು ಮೈದಾನದಲ್ಲಿ ಆಡುವುದು ತುಂಬಾ ವಿಶೇಷವಾಗಿದೆ. ಆ ಭಾವನೆ ಯಾವಾಗಲೂ ನನ್ನಲ್ಲಿ ವಿಶೇಷವಾಗಿರುತ್ತದೆ. ನನ್ನ ಕುಟುಂಬ ಸದಸ್ಯರು ಸಹ ಈ ಕ್ರೀಡಾಂಗಣದಲ್ಲಿ ಪ್ರೇಕ್ಷಕರಾಗಿದ್ದಾರೆ. ಅವರಿಂದು ತುಂಬಾ ಸಂತೋಷವಾಗಿರುತ್ತಾರೆ. ನಾನು ಕಳೆದ ಏಳು ವರ್ಷಗಳಿಂದ ಬೆಂಗಳೂರು ಪರ ಆಡಿದ್ದೇನೆ ಮತ್ತು ಈಗ ನಾನು ಗುಜರಾತ್ ಪರ ಆಡುತ್ತಿದ್ದೇನೆ. ನನ್ನ ಬೌಲಿಂಗ್‌ನಲ್ಲಿ ನಾನು ಸಾಕಷ್ಟು ಶ್ರಮಿಸಿದ್ದೇನೆ. ಅದು ನನಗೆ ಬಹಳಷ್ಟು ಒಳ್ಳೆಯದನ್ನು ಮಾಡಿದೆ ಎಂದು ಸಿರಾಜ್ ಹೇಳಿದರು.

2025ರ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದಿದ್ದಕ್ಕೆ ನನಗೆ ನಿಜಕ್ಕೂ ನಿರಾಶೆಯಾಯಿತು. ಒಂದು ಹಂತದಲ್ಲಿ, ಆ ನಿರ್ಧಾರವನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ನಾನು ಶ್ರಮಿಸಿದೆ. ಹಿಂದೆ ನಾನು ಮಾಡಿದ ತಪ್ಪುಗಳನ್ನು ಅರಿತುಕೊಂಡು ಅವುಗಳನ್ನು ಸರಿಪಡಿಸಿಕೊಂಡೆ. ಅದರ ಫಲಿತಾಂಶ ಈಗ ಗೋಚರಿಸುತ್ತಿದೆ. ನಾನು ನನ್ನ ಬೌಲಿಂಗ್ ಅನ್ನು ಆನಂದಿಸುತ್ತಿದ್ದೇನೆ. ಭಾರತೀಯ ತಂಡದಲ್ಲಿ ನನಗೆ ಅವಕಾಶ ಸಿಗದಿದ್ದರೂ, ನಾನು ನನ್ನನ್ನು ಪ್ರೋತ್ಸಾಹಿಸಿಕೊಂಡೆ. ಈ ಕ್ರಮದಲ್ಲಿ, ನಾನು ಐಪಿಎಲ್ 2025ರಲ್ಲಿ ಆಡಲು ಸಿದ್ಧನಾದೆ. ನಾನು ಯೋಜಿಸಿದಂತೆ ಮೈದಾನದಲ್ಲಿ ಆಟದ ಶೈಲಿಯನ್ನು ಕಾರ್ಯಗತಗೊಳಿಸಿದರೆ, ವಿಕೆಟ್‌ಗಳು ಬರುತ್ತವೆ ಎಂದು ಮೊಹಮ್ಮದ್ ಸಿರಾಜ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net