ಸಿರಾಜ್​ ನಡೆಗೆ ಐಸಿಸಿ ಗರಂ! ವಿಕೆಟ್​ ಕಿತ್ತ ಸಂಭ್ರಮದ ಬೆನ್ನಲ್ಲೇ ಬಿತ್ತು ದಂಡದ ಬಿಸಿ | Mohammed Siraj

ವಿಜಯವಾಣಿ (62)
Published on

Mohammed Siraj: ಪ್ರಸಕ್ತ ಲಾರ್ಡ್ಸ್​​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​ನ ಐದನೇ ದಿನದಂದು ಗಿಲ್​ ಪಡೆ ಗೆಲುವಿಗಾಗಿ ಕ್ರೀಸ್​ನಲ್ಲಿ ಸೆಣಸುತ್ತಿದೆ. ಪ್ರಸ್ತುತ ಐದು ವಿಕೆಟ್​ಗಳನ್ನು ಕಳೆದುಕೊಂಡಿರುವ ಭಾರತ ಪರ ಕೆ.ಎಲ್. ರಾಹುಲ್​ ಮತ್ತು ರವೀಂದ್ರ ಜಡೇಜಾ ಅಖಾಡದಲ್ಲಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾ ವೇಗಿಗೆ ಶಾಕ್ ಕೊಟ್ಟಿರುವ ಐಸಿಸಿ, ಮೊಹಮ್ಮದ್ ಸಿರಾಜ್ ನಡೆಗೆ ದಂಡದ ಮೂಲಕ ಪ್ರತಿಕ್ರಿಯಿಸಿದೆ. ​

ಪಂದ್ಯ ಶುಲ್ಕದ ಶೇ.15ರಷ್ಟು ದಂಡವನ್ನು ಸಿರಾಜ್​ಗೆ ವಿಧಿಸಿದೆ. ಇದರೊಟ್ಟಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರಿಸಿದೆ. ಲಾರ್ಡ್ಸ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸಿರಾಜ್​ಗೆ ದಂಡ ವಿಧಿಸಲಾಗಿದೆ. ಅಷ್ಟಕ್ಕೂ ವೇಗಿ ಮಾಡಿದ ತಪ್ಪೇನು? ಆಗಿದ್ದಾದರು ಏನು? ಎಂಬುದರ ವಿವರ ಹೀಗಿದೆ.

ನಡೆದಿದ್ದೇನು?

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 387 ರನ್ ಕಲೆಹಾಕಿತು. ಬಳಿಕ ಬ್ಯಾಟ್ ಮಾಡಿದ ಭಾರತ ಕೂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 387 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್​ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಜಸ್ಪ್ರೀತ್ ಬುಮ್ರಾಗೆ ಕ್ಯಾಚ್ ನೀಡಿದ ಬೆನ್ ಡಕೆಟ್​ (12) ಔಟಾದರು. ಡಕೆಟ್​ ಪೆವಿಲಿಯನ್​ಗೆ ಹೋಗುತ್ತಿದ್ದಂತೆ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸಿದ ಸಿರಾಜ್, ಈ ವಿಷಯದಲ್ಲಿ ಐಸಿಸಿ ನೀತಿ ಸಂಹಿತೆಗೆ ವಿರುದ್ಧವಾಗಿ ನಡೆದುಕೊಂಡರು. ಇದೇ ಅವರ ದಂಡಕ್ಕೆ ಕಾರಣವಾಗಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಸಿರಾಜ್​ ಉಲ್ಲಂಘಿಸಿದ್ದಾರೆ ಎಂದು ಹೇಳಿರುವ ಐಸಿಸಿ, ಅವರ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ. ಆದಾಗ್ಯೂ, ಒಬ್ಬ ಆಟಗಾರ 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್‌ಗಳನ್ನು ಸಂಗ್ರಹಿಸಿದರೆ, ಅವುಗಳನ್ನು ಅಮಾನತು ಪಾಯಿಂಟ್‌ಗಳಾಗಿ ಪರಿವರ್ತಿಸಲಾಗುತ್ತದೆ. ಇದು ಎಚ್ಚರಿಕೆ ಸಂದೇಶವಾಗಿದೆ. ಹಾಗೂ ಆ ಆಟಗಾರನನ್ನು ಮುಂಬರುವ ಪಂದ್ಯದಿಂದ ನಿಷೇಧಿಸಲಾಗುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net