ಸರ್ವೆಯಲ್ಲಿ ಶಾಕಿಂಗ್ ಸಂಗತಿಗಳು ಬಯಲು! ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶದವರು | Bihar Voter Roll

ವಿಜಯವಾಣಿ (61)
Published on

Bihar Voter Roll: ಇತ್ತೀಚೆಗಷ್ಟೇ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಚುನಾವಣಾ ಆಯೋಗ ನಿರ್ವಹಿಸಿದ ರೀತಿಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿತು. ಮತದಾರರ ಪಟ್ಟಿ ಪ್ರಕ್ರಿಯೆಯಲ್ಲಿನ ದೋಷಗಳನ್ನು ಸರಿಪಡಿಸುವ ಪ್ರಕ್ರಿಯೆಯು ಉತ್ತಮವಾಗಿದೆ ಎಂದಿದ್ದ ನ್ಯಾಯಾಲಯ, ಈ ಪ್ರಕ್ರಿಯೆಯನ್ನು ಮೊದಲೇ ಏಕೆ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತು. ಈ ಬೆನ್ನಲ್ಲೇ ಮತದಾರರ ಪಟ್ಟಿಯಿಂದ ಅನರ್ಹರನ್ನು ತೆಗೆದುಹಾಕುವಂತೆ ಸೂಚಿಸಿತು.

ಬಿಹಾರದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (SIR) ಭಾಗವಾಗಿ ಚುನಾವಣಾ ಆಯೋಗವು ಮನೆ ಮನೆಗೆ ತೆರಳಿ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿ ವಿಷಯಗಳು ಬೆಳಕಿಗೆ ಬಂದಿವೆ. ಈಗಿರುವ ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ದೇಶದ ಅನೇಕ ನಿವಾಸಿಗಳು ಪ್ರಸ್ತುತ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಚುನಾವಣಾ ಸಂಸ್ಥೆಯ ಮೂಲಗಳು ಕಳವಳ ವ್ಯಕ್ತಪಡಿಸಿವೆ.

ಇವರೆಲ್ಲ ಆಧಾರ್, ನಿವಾಸ ದೃಢಿಕರಣ ಪತ್ರ ಮತ್ತು ಪಡಿತರ ಚೀಟಿಗಳಂತಹ ಭಾರತೀಯ ಮೂಲ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿರುವ ಬ್ಲಾಕ್ ಮಟ್ಟದ ಅಧಿಕಾರಿಗಳು, ಇಂತಹ ಅನೇಕ ವ್ಯಕ್ತಿಗಳನ್ನು ಗುರುತಿಸಿ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಹಾಕಲು ನಿರ್ಧರಿಸಿದ್ದಾರೆ. ಅದು ಸೂಕ್ತ ತನಿಖೆಯ ಆಧಾರದ ಮೇರೆಗೆ ಎಂಬುದು ಗಮನಾರ್ಹ.

ಈ ಪ್ರಕರಣಗಳನ್ನು ಆಗಸ್ಟ್ 1ರಿಂದ ಆ.30ರ ನಡುವೆ ವಿವರವಾಗಿ ತನಿಖೆ ನಡೆಸಲಾಗುವುದು. ಆರೋಪಗಳು ಸಾಬೀತಾದರೆ, ಈ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ವರದಿಯಾಗಿದೆ. ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಂತೆಯೇ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಭಾರೀ ಸದ್ದು ಮಾಡುತ್ತಿದೆ. ಇದು ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net