

ಬೆಂಗಳೂರು: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಅದ್ಭುತ ದಾಳಿ ಸಂಟಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿಯಾಗಿ ಮಿಂಚಿದ ವೇಗಿ ಮೊಹಮದ್ ಸಿರಾಜ್ ಐಸಿಸಿ ಏಕದಿನ ಬೌಲಿಂಗ್ ರ್ಯಾಂಕಿಂಗ್ನಲ್ಲಿ ವಿಶ್ವ ನಂ. 1 ಪಟ್ಟಕ್ಕೆ ಮರಳಿದ್ದಾರೆ.
ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ವಿಶ್ವ ನಂ. 1 ಪಟ್ಟಕ್ಕೇರಿದ್ದ ಸಿರಾಜ್, ಮಾರ್ಚ್ನಲ್ಲಿ ಆಸ್ಟ್ರೆಲಿಯಾದ ವೇಗಿ ಜೋಶ್ ಹ್ಯಾಸಲ್ವುಡ್ಗೆ ಅಗ್ರಸ್ಥಾನ ಬಿಟ್ಟುಕೊಟ್ಟಿದ್ದರು. ಏಷ್ಯಾಕಪ್ಗೆ ಮುನ್ನ ಸಿರಾಜ್ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದರು. ಆದರೆ ೈನಲ್ ಪಂದ್ಯದಲ್ಲಿ 6 ವಿಕೆಟ್ ಗೊಂಚಲು ಪಡೆದು ಶ್ರೀಲಂಕಾವನ್ನು ಕೇವಲ 50 ರನ್ಗೆ ಆಲೌಟ್ ಮಾಡಿ ಕಂಗೆಡಿಸಿದ ಸಿರಾಜ್ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ ಸಾಧನೆಯಿಂದ ರ್ಯಾಂಕಿಂಗ್ನಲ್ಲಿ ಬರೋಬ್ಬರಿ 8 ಸ್ಥಾನ ಪ್ರಗತಿ ಕಂಡಿದ್ದಾರೆ. ಹ್ಯಾಸಲ್ವುಡ್ 2ನೇ ಮತ್ತು ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಭಾರತದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಉತ್ತಮ ನಿರ್ವಹಣೆಯ ನಡುವೆಯೂ 3 ಸ್ಥಾನ ಕುಸಿದು 9ನೇ ಸ್ಥಾನದಲ್ಲಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ 2 ಸ್ಥಾನ ಮೇಲೇರಿ 27ನೇ ಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ 8 ಸ್ಥಾನ ಮೇಲೇರಿ 50ನೇ ಸ್ಥಾನ ಪಡೆದಿದ್ದಾರೆ.
ಬ್ಯಾಟರ್ಗಳಲ್ಲಿ ಶುಭಮಾನ್ ಗಿಲ್ ಮತ್ತು ರೋಹಿತ್ ಶರ್ಮ ಕ್ರಮವಾಗಿ 2 ಮತ್ತು 10ನೇ ಸ್ಥಾನ ಕಾಯ್ದುಕೊಂಡಿದ್ದರೆ, ವಿರಾಟ್ ಕೊಹ್ಲಿ 1 ಸ್ಥಾನ ಮೇಲೇರಿ 8ನೇ ಸ್ಥಾನ ಅಲಂಕರಿಸಿದ್ದಾರೆ. ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಹಾರ್ದಿಕ್ ಪಾಂಡ್ಯ ಅಗ್ರ 10ರೊಳಗಿರುವ ಏಕೈಕ ಭಾರತೀಯರಾಗಿದ್ದು, 6ನೇ ಸ್ಥಾನದಲ್ಲಿದ್ದಾರೆ.