

ಬೆಂಗಳೂರು: ಕಳೆದ 2019ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಯಜುವೇಂದ್ರ ಚಾಹಲ್ ಈ ಬಾರಿ ತವರು ನೆಲದಲ್ಲಿ ವಿಶ್ವಕಪ್ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ಲಭಿಸಿಲ್ಲ. ಅವರ ಬದಲಿಗೆ ಅಕ್ಷರ್ ಪಟೇಲ್ಗೆ ಅದೃಷ್ಟ ಒಲಿದಿತ್ತು. ಈಗ ಅಕ್ಷರ್ ಗಾಯಗೊಂಡಿದ್ದರೂ, ಆರ್. ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಈಗ ಬದಲಿ ಸ್ಪಿನ್ನರ್ಗಳಾಗಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಕೊನೇಕ್ಷಣದಲ್ಲಿ ತಂಡದಲ್ಲಿ ಸ್ಥಾನ ಸಂಪಾದಿಸುವ ಚಾಹಲ್ ಆಸೆಯೂ ದೂರವಾಗಿದೆ. ಆದರೇನಂತೆ, ಅವರ ಪತ್ನಿ ಧನಶ್ರೀ ವರ್ಮಗೆ ಈಗ ವಿಶ್ವಕಪ್ನ ಭಾಗವಾಗುವ ಅದೃಷ್ಟ ಒಲಿದಿದೆ!
ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯ ಧ್ಯೇಯಗೀತೆಯನ್ನು ಐಸಿಸಿ ಬುಧವಾರ ಅನಾವರಣಗೊಳಿಸಿದೆ. "ದಿನ್ ಜಶನ್ ಬೋಲೆ' ಎಂಬ ಶುರುವಾಗುವ ಗೀತೆಯಲ್ಲಿ ಬಾಲಿವುಡ್ ತಾರೆ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣವೀರ್ ಅವರೊಂದಿಗೆ ಕೋರಿಯೋಗ್ರಾರ್ ಕೂಡ ಆಗಿರುವ ಧನಶ್ರೀ ವರ್ಮ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ.
3 ನಿಮಿಷಗಳ ವಿಡಿಯೋ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಒನ್ಡೇ ಎಕ್ಸ್ಪ್ರೆಸ್' ಎಂಬ ರೈಲಿನ ಥೀಮ್ನೊಂದಿಗೆ ಕ್ರಿಕೆಟ್ ಪ್ರೇಮಿಗಳನ್ನು ವಿಶ್ವಕಪ್ಗೆ ಆಹ್ವಾನಿಸುವ ಹಾಡು ಇದಾಗಿದೆ. ಪತಿ ಚಾಹಲ್ಗೆ ವಿಶ್ವಕಪ್ನಲ್ಲಿ ಆಡುವ ಅವಕಾಶ ಲಭಿಸದಿರುವ ನಡುವೆ ಧನಶ್ರೀ ವರ್ಮ ಹಾಡಿನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.