

ಬೆಂಗಳೂರು: ಮೊಹಮದ್ ಶಮಿ ಹಾಗೂ ನಿಕೋಲಸ್ ಪೂರನ್ ಇಬ್ಬರೂ ಕಿಂಗ್ಸ್ ಇಲೆವೆನ್ ಪಂಬಾಜ್ ತಂಡದ ಪ್ರಮುಖ ಆಟಗಾರರು. ಟೀಮ್ ಇಂಡಿಯಾದ ಬಲಗೈ ವೇಗದ ಬೌಲರ್ ಶಮಿ, ವೆಸ್ಟ್ ಇಂಡೀಸ್ ಆಟಗಾರನಿಗೆ ಹಿಂದಿ ಕಲಿಸುತ್ತಿರುವ ವಿಡಿಯೋವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ‘ಅಪ್ ಕಹಾನ್ ಜಾ ರಹೇ ಹೋ’ (ನೀವು ಎಲ್ಲಿಗೆ ಹೋಗುತ್ತಿರುವಿರಿ) ಎಂದು ನಿಕೋಲಸ್‌ಗೆ ಹೇಳಿಕೊಟ್ಟಿದ್ದಾರೆ. 2018ರಲ್ಲಿ ನಡೆದ ಈ ಘಟನೆಯಲ್ಲಿ ಫ್ರಾಂಚೈಸಿ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಿದ ಐಪಿಎಲ್ ವಾತಾವರಣವನ್ನು ಮೆಲುಕು ಹಾಕಿದೆ.
2018ರಲ್ಲಿ ನಿಕೋಲಸ್ ಪೂರನ್ ಅವರನ್ನು ಪಂಜಾಬ್ ತಂಡ 4.20 ಕೋಟಿ ರೂಪಾಯಿಗೆ ಖರೀದಿಸಿತ್ತು. 2019ರ ಆವೃತ್ತಿಯಲ್ಲಿ ಪೂರನ್ ಆಡಿದ 7 ಪಂದ್ಯಗಳಿಂದ 168 ರನ್ ಸಿಡಿಸಿದ್ದರು. ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪೂರನ್ ಇದುವರೆಗೂ ಆಡಿರುವ 25 ಏಕದಿನ ಪಂದ್ಯಗಳಿಂದ ಸರಾಸರಿ 49.05 ರಂತೆ 932 ರನ್ ಸಿಡಿಸಿದ್ದಾರೆ. ಜತೆಗೆ 21 ಟಿ20 ಪಂದ್ಯಗಳಿಂದ 353 ರನ್ ಬಾರಿಸಿದ್ದಾರೆ.
2018ರಲ್ಲೇ ಮೊಹಮದ್ ಶಮಿ ಕೂಡ 4.80 ಕೋಟಿ ರೂಪಾಯಿಗೆ ಪಂಜಾಬ್ ತಂಡ ಖರೀದಿಸಿತ್ತು. 2019ರಲ್ಲಿ ಲೀಗ್ ಹಂತದಲ್ಲಿ ಆಡಿದ ಎಲ್ಲ 14 ಪಂದ್ಯಗಳಿಂದ 19 ವಿಕೆಟ್ ಕಿತ್ತಿದ್ದರು. ಆದರೆ, ಈ ವರ್ಷ ಕರೊನಾ ವೈರಸ್‌ನಿಂದಾಗಿ 13ನೇ ಆವೃತ್ತಿಯ ಐಪಿಎಲ್ ಅನಿರ್ದಿಷ್ಟಾವಧಿ ವರೆಗೆ ಮುಂದೂಡಿಕೆಯಾಗಿದೆ. ಶಮಿ ಇತ್ತೀಚೆಗೆ ತಮ್ಮ ಫಾರ್ಮ್ ಹೌಸ್‌ನಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿರುವ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದರು.