

ನವದೆಹಲಿ: ಕಳೆದ ತಿಂಗಳು ಮುಕ್ತಾಯವಾದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ ನೀಡಲು ಬಿಸಿಸಿಐ ಶಿಫಾರಸು ಮಾಡಲಾಗಿದೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯ ನಂತರ ಅರ್ಜುನ ಪ್ರಶಸ್ತಿಯು ದೇಶದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. ತಮ್ಮ ಮಿಂಚಿನ ಬೌಲಿಂಗ್ ದಾಳಿಯಿಂದ ಕಡಿಮೆ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಶಮಿಗೆ ಪ್ರಶಸ್ತಿ ನೀಡಲು ಬಿಸಿಸಿಐ ವಿಶೇಷವಾಗಿ ಆಯ್ಕೆ ಸಮಿತಿಗೆ ಶಿಫಾರಸು ಮಾಡಿದೆ. ನಾಮನಿರ್ದೇಶಿತರ ಪಟ್ಟಿಯಲ್ಲಿ ಶಮಿ ಹೆಸರು ಇರಲಿಲ್ಲ. ಆದರೆ, ಬಿಸಿಸಿಐನ ವಿಶೇಷ ಮನವಿಯ ಪರವಾಗಿ ನಾಮನಿರ್ದೇಶನ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ವಿಶ್ವಕಪ್ ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್ ಪಡೆದ ಖ್ಯಾತಿಯನ್ನು ಶಮಿ ಹೊಂದಿದ್ದಾರೆ. ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ಶಮಿ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ಬಳಿಕ ಆಡುವ ಹನ್ನೊಂದರ ಬಳಗ ಸೇರಿಕೊಂಡರು. ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್ ಪಡೆಯುವ ಮೂಲಕ ಕ್ರೀಡಾ ಜಗತ್ತಿನ ಗಮನ ಸೆಳೆದರು.
ಶಮಿ ಏಳು ಪಂದ್ಯಗಳಲ್ಲಿ ಮೂರು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಏಕದಿನ ವಿಶ್ವಕಪ್ನಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಆಟಗಾರರ ಸಾಲಿಗೆ ಸೇರಿಕೊಂಡಿದ್ದಾರೆ. ಆದಾಗ್ಯೂ, ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋತಿತು. ನಿರ್ಣಾಯಕ ಪಂದ್ಯದಲ್ಲಿ ಶಮಿ ಅವರು ತಮ್ಮ ಫಾರ್ಮ್ ಮುಂದುವರಿಸಲು ಸಾಧ್ಯವಾಗದೆ ನಿರಾಶೆಗೊಂಡರು.
ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ನಂತರ ತೀವ್ರ ದುಃಖಕ್ಕೆ ಜಾರಿದ ಶಮಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದರು. ಈ ವಿಡಿಯೋ ಸಹ ಎಲ್ಲೆಡೆ ವೈರಲ್ ಆಗಿತ್ತು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನ.19ರಂದು ಅಹಮಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಮಹತ್ವದ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ 241 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ 43 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್ಗೆ ಟ್ರಾವಿಸ್ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್ 120 ಎಸೆತ 15 ಬೌಂಡರಿ, 4ಸಿಕ್ಸರ್) , ಆಸಿಸ್ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್ ಜತೆಗೆ ಮಾರ್ನಸ್ ಲಬುಶೇನ್ ಉತ್ತಮ ಸಾಥ್ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್ಗಳ ಅರ್ಧಶತಕ ಸಿಡಿಸಿ ಮಿಂಚಿದರು. (ಏಜೆನ್ಸೀಸ್)