

ನವದೆಹಲಿ: ವೃತ್ತಿಯಲ್ಲಿ ಅದ್ಭುತ ಯಶಸ್ಸು ಕಂಡ ಟೀಮ್ ಇಂಡಿಯಾದ (Team India) ಹೆಸರಾಂತ ವೇಗಿ ಮೊಹಮ್ಮದ್ ಶಮಿ (Mohammed Shami), ತಮ್ಮ ದಾಂಪತ್ಯ ಜೀವನದಲ್ಲಿ ತೀವ್ರ ಸಂಕಷ್ಟ ಎದುರಿಸಿದರು. ಮದುವೆ ಸಂಬಂಧದಲ್ಲಿ ಬಿರುಕು ಮೂಡಿದ ನಂತರ ಪರಸ್ಪರ ಒಪ್ಪಿಗೆಯ ಮೇರೆಗೆ ಹಸಿನ್ ಜಾಹನ್ಗೆ ವಿಚ್ಛೇದನ ನೀಡಿದ ಶಮಿ, ಆಗಾಗ್ಗೆ ತಮ್ಮ ಮಗಳನ್ನು ಭೇಟಿಯಾಗುತ್ತಿರುತ್ತಾರೆ. ಇದೇ ರೀತಿ ಇತ್ತೀಚೆಗಷ್ಟೇ ಬಹುದಿನಗಳ ಬಳಿಕ ಪುತ್ರಿಯನ್ನು ಮುಖಾಮುಖಿ ಭೇಟಿಯಾದ ಮೊಹಮ್ಮದ್, ಮಗಳ ಜತೆ ಕೆಲವು ಸ್ಥಳಗಳಿಗೆ ತೆರಳಿ, ಆಕೆಗೆ ಒಂದಷ್ಟು ವಸ್ತುಗಳನ್ನು ಕೊಡಿಸಿದರು. ಈ ವಿಡಿಯೋಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಅಪ್ಪ-ಮಗಳ ಬಾಂಧವ್ಯಕ್ಕೆ ಶಮಿ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರೀತಿಯ ಸಂದೇಶ ರವಾನಿಸಿದ್ದರು. ಆದ್ರೆ, ಮಾಜಿ ಪತ್ನಿ ಮಾತ್ರ ಶಮಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಹಳ ದಿನಗಳ ನಂತರ ಮಗಳು ಐರಾರನ್ನು ಮುಖಾಮುಖಿ ಭೇಟಿಯಾದ ಶಮಿ, ಆಕೆಯನ್ನು ಮಾಲ್ನಲ್ಲಿ ತಿರುಗಾಡಿಸಿ, ಒಂದಷ್ಟು ಕಾಲ ಪುತ್ರಿಯೊಂದಿಗೆ ಸಮಯ ಕಳೆದರು. ಇದೇ ವೇಳೆ ಮಗಳನ್ನು ಅಂಗಡಿಗಳಿಗೆ ತೆರಳಿದ ಅವರು, ಆಕೆ ಇಷ್ಟಪಟ್ಟಿದ್ದನ್ನು ಖರೀದಿ ಮಾಡಿ, ಮಾಲ್ನ ಸುತ್ತಮುತ್ತ ಓಡಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳನ್ನು ತಮ್ಮ ಖಾಸಗಿ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡ ಮೊಹಮ್ಮದ್ ಶಮಿ, ತುಂಬ ದಿನದ ಬಳಿಕ ನಿನ್ನನ್ನು ನೋಡಿದ್ದು, ಐ ಲವ್ ಯೂ ಮಗಳೇ ಎಂದು ಪ್ರೀತಿ ವ್ಯಕ್ತಪಡಿಸಿದರು.
"ಮಗಳನ್ನು ಆತ ಭೇಟಿಯಾಗಿದ್ದೇನೋ ನಿಜ. ಆದ್ರೆ, ಅವರ ಉದ್ದೇಶ ಪುತ್ರಿ ಕೇಳಿದ್ದನ್ನು ಕೊಡಿಸಬೇಕು, ಮಾಡಬೇಕು ಎಂಬುದಾಗಿರಲಿಲ್ಲ. ಅಷ್ಟಕ್ಕೂ ಐರಾಗೆ ಗಿಟಾರ್ ಮತ್ತು ಕ್ಯಾಮರಾ ಅಗತ್ಯವಿತ್ತು. ಅವಳು ಇವೆರಡನ್ನು ಖರೀದಿಸುವ ಬಯಕೆ ಹೊಂದಿದ್ದಳು. ಆದರೆ, ಶಮಿ ಮಾತ್ರ ಪುತ್ರಿ ಬಯಸಿದ್ದನ್ನು ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಮಗಳು ಆಸೆ ಪಟ್ಟಿದ್ದನ್ನು ಖರೀದಿಸುವ ಬದಲಿಗೆ ಅದ್ಯಾವುದೋ ಬ್ರ್ಯಾಂಡ್ ಶೋರೂಮ್ಗೆ ಕರೆದೊಯ್ದಿದ್ದಾರೆ. ಇದೆಲ್ಲಾ ಶೋಕಿ ಅಷ್ಟೇ. ನನ್ನ ಮಗಳ ಪಾಸ್ಪಾರ್ಟ್ ಅವಧಿ ಮುಕ್ತಾಯಗೊಂಡಿದೆ. ಈಗ ಅದರ ನವೀಕರಣದ ಅಗತ್ಯವಿದೆ. ಹೀಗಾಗಿ ಆಕೆ ತನ್ನ ತಂದೆಯ ಸಹಿಗಾಗಿ ಶಮಿಯನ್ನು ಭೇಟಿಯಾದಳು. ಒಂದು ಸಹಿ ಹಾಕುವುದನ್ನು ಬಿಟ್ಟು ಶಮಿ ಇನ್ನೆಲ್ಲಾ ಮಾಡಿದ್ದಾರೆ" ಎಂದು ಮಾಜಿ ಪತಿ ವಿರುದ್ಧ ಹಸಿನ್ ಕಿಡಿಕಾರಿದ್ದಾರೆ,(ಏಜೆನ್ಸೀಸ್).