ಕೆಲವರು ರೋಹಿತ್​, ಕೊಹ್ಲಿ ಸೋತರೆ ಸಾಕು ಅಂತಾರೆ! ಪರೋಕ್ಷವಾಗಿ ಆಯ್ಕೆಗಾರರಿಗೆ ಕುಟುಕಿದ್ರಾ ಕೈಫ್ | RoKo​

roko
Published on

ನವದೆಹಲಿ: ಅ.25ರಂದು ಸಿಡ್ನಿಯಲ್ಲಿ ನಡೆದ ಆತಿಥೇಯ ಆಸೀಸ್ (RoKo)​ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ‘ರೋಕೊ’ ಜೋಡಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, ಭಾರತಕ್ಕೆ 9 ವಿಕೆಟ್​ಗಳ ಅಂತರದಲ್ಲಿ ಗೆಲುವು ತಂದುಕೊಟ್ಟಿತು. ತಂಡದ ಪರ ಸ್ಪೋಟಕ ಇನ್ನಿಂಗ್ಸ್ ನೀಡಿದ ರೋಹಿತ್ ಶರ್ಮ ಅಜೇಯ 121 ರನ್​ ಮತ್ತು ವಿರಾಟ್​ ಕೊಹ್ಲಿ ಅಜೇಯ 74 ರನ್ ಬಾರಿಸಿದರು. ಈ ಇಬ್ಬರು ದಿಗ್ಗಜರ ಪರ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಧ್ವನಿ ಎತ್ತಿದ್ದಾರೆ.

ಈ ಏಕದಿನ ಸರಣಿಯಲ್ಲಿ 'ರೋಕೊ' ಉತ್ತಮ ಪ್ರದರ್ಶನ ನೀಡಿದ್ರೆ ಮಾತ್ರ ಅವರನ್ನು 2027ರ ವಿಶ್ವಕಪ್​ಗೆ ಆಯ್ಕೆ ಮಾಡುವ ಬಗ್ಗೆ ಯೋಚಿಸುತ್ತೇವೆ ಎಂದು ಬಿಸಿಸಿಐ ಮುಖ್ಯ ಆಯ್ಕೆಗಾರರು ತಿಳಿಸಿದ್ದರು. ಅಂತೆಯೇ, ಕೊನೆಯ ಪಂದ್ಯದಲ್ಲಿ ರೋಹಿತ್ ಮತ್ತು ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ, ತಮ್ಮನ್ನು ಏಕೆ ದಿಗ್ಗಜ ಕ್ರಿಕೆಟಿಗರು ಎಂದು ಕರೆಯುತ್ತಾರೆ ಎಂಬುದನ್ನು ಸಾಬೀತುಪಡಿಸಿದರು. ಮೊದಲ ಎರಡು ಪಂದ್ಯಗಳಲ್ಲಿ ಕೊಹ್ಲಿ ಡಕ್​ಔಟ್​ ಆಗುವ ಮೂಲಕ ನಿವೃತ್ತಿ ಪ್ರಶ್ನೆಗಳಿಗೆ ಪುಷ್ಠಿ ನೀಡಿದ್ದರು. ಇನ್ನು ರೋಹಿತ್​ ಅರ್ಧಶತಕ ಮೂಲಕ ಅಸಲಿ ಆಟದ ಮುನ್ಸೂಚನೆ ನೀಡಿದ್ದರು. ಅಂತೆಯೇ, ಕೊನೆಯ ಪಂದ್ಯದಲ್ಲಿ ಕೆಲವರ ಲೆಕ್ಕಾಚಾರಗಳನ್ನು ಬದಲಿಸಿದರು.

ಈ ವಿಚಾರವನ್ನೇ ಮುಂದಿಟ್ಟು ಮಾತನಾಡಿರುವ ಕೈಫ್​, "ಒಂದಷ್ಟು ಆಯ್ಕೆಗಾರರು ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಇಬ್ಬರೂ ಕಳಪೆ ಪ್ರದರ್ಶನ ನೀಡಲಿ ಎಂದು ಆಶಿಸುತ್ತಾರೆ. ಅವರಿಬ್ಬರು ಸೋಲಿನಲ್ಲಿ ಖುಷಿ ಪಡುತ್ತಾರೆ. ಏಕೆಂದರೆ, ರೋಕೊ ಕೈಯಿಂದ ಆಗಲಿಲ್ಲ ಎಂದರೆ ತಂಡದಿಂದ ಅವರನ್ನು ಸುಲಭವಾಗಿ ಕೈಬಿಡಬಹುದು ಎಂಬ ಕಾರಣಕ್ಕೆ. 2027ರ ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಮತ್ತು ಕೊಹ್ಲಿ ಆಡಲೇಬೇಕು. ಕಾರಣ, ಅವರ ಅನುಭವ. ಪ್ರಸ್ತುತ, ಟಿ20 ಮತ್ತು ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿರುವ ರೋಕೊ, ಏಕದಿನಕ್ಕೆ ಮಾತ್ರ ಲಭ್ಯವಿದ್ದಾರೆ" ಎಂದರು.

"ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್​ಗೆ ರೋಕೊ ಜೋಡಿಯ ಅಗತ್ಯವಿದೆ. ಅಲ್ಲಿನ ಬೌನ್ಸಿ ಪಿಚ್​ಗೆ ಅವರ ಉಪಸ್ಥಿತಿ ಮುಖ್ಯ. ಇಂದಿಗೂ ಜನ ಅವರಿಬ್ಬರನ್ನು ಈ ಮಟ್ಟಿಗೆ ಪ್ರೀತಿಸಿ, ಪಂದ್ಯಗಳನ್ನು ಆಡುವಂತೆ ಬೆಂಬಲಿಸುತ್ತಿದ್ದಾರೆ ಎಂದರೆ ಅವರಿಗೆ ಗೊತ್ತು, ರೋಹಿತ್ ಮತ್ತು ಕೊಹ್ಲಿ ಯಾವ ತಪ್ಪನ್ನು ಮಾಡಿಲ್ಲ ಎಂದು. ಮುಂಬರುವ ಟೂರ್ನಿಯಲ್ಲಿ ಅವರನ್ನು ನೋಡಲು ಬಯಸಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಬಹಳ ತಾಳ್ಮೆಯಿಂದ, ಎಲ್ಲಿಯೂ ಆಟವನ್ನು ಬಿಟ್ಟುಕೊಡದೆ ಆಡಿದ್ದಾರೆ" ಎಂದು ಕೈಫ್ ರೋಕೊ ಜೋಡಿಯನ್ನು​ ಹೊಗಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net