ಮತ್ತೆ ಇಲ್ಲಿಗೆ ಬರೋದು... ಸ್ಫೋಟಕ ಇನ್ನಿಂಗ್ಸ್ ಬೆನ್ನಲ್ಲೇ ನಿವೃತ್ತಿ ಸೂಚನೆ ಕೊಟ್ಟ 'ರೋಕೊ' | IND vs AUS

ಮತ್ತೆ ಇಲ್ಲಿಗೆ ಬರೋದು... ಸ್ಫೋಟಕ ಇನ್ನಿಂಗ್ಸ್ ಬೆನ್ನಲ್ಲೇ ನಿವೃತ್ತಿ ಸೂಚನೆ ಕೊಟ್ಟ 'ರೋಕೊ' | IND vs AUS
Published on

ಆಸ್ಟ್ರೇಲಿಯಾ: ಇಂದು (ಅ.25) ಸಿಡ್ನಿಯಲ್ಲಿ ನಡೆದ ಆತಿಥೇಯ ಆಸೀಸ್ (IND vs AUS)​ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ‘ರೋಕೊ’ ಜೋಡಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, ಭಾರತಕ್ಕೆ 9 ವಿಕೆಟ್​ಗಳ ಅಂತರದಲ್ಲಿ ಗೆಲುವು ತಂದುಕೊಟ್ಟಿತು. ತಂಡದ ಪರ ಸ್ಪೋಟಕ ಇನ್ನಿಂಗ್ಸ್ ನೀಡಿದ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ, ತಾವು ಮತ್ತೆ ಆಸ್ಟ್ರೇಲಿಯಾಗೆ ಕಾಲಿಡುವ ಬಗ್ಗೆ ಮುಕ್ತವಾಗಿ ಮಾತನಾಡಿದರು.

"ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಅಭಿಮಾನಿಗಳ ಮುಂದೆ ಪಂದ್ಯವನ್ನಾಡುವುದು ಹಾಗೂ ಇಲ್ಲಿಗೆ ಬರುವುದು ಖುಷಿಯಿದೆ. ನಮ್ಮಿಂದ ಎಷ್ಟು ಸಾಧ್ಯವೋ, ಅದನ್ನು ಮೀರಿ ಕೊಟ್ಟಿದ್ದೇವೆ. ಎಲ್ಲಿಯೂ ಆಸ್ಟ್ರೇಲಿಯಾ ಜನರಿಂದ ನಮಗೆ ಬೆಂಬಲ ಕಡಿಮೆ ಆಗಲಿಲ್ಲ" ಎಂದು ವಿರಾಟ್​ ಹೇಳಿದರು.

"ಆಸೀಸ್​ ನೆಲದಲ್ಲಿ ಬ್ಯಾಟಿಂಗ್ ಮಾಡುವುದರಲ್ಲಿ ನನಗೆ ಸಂತೋಷವಿದೆ. ಇಲ್ಲಿ ಆಡುವಾಗ ನಾನು ಆನಂದಿಸುತ್ತೇನೆ. 2008ರಿಂದ ಒಳ್ಳೆಯ ನೆನಪುಗಳಿವೆ. ಉತ್ತಮ ರೀತಿಯಲ್ಲಿ ಸರಣಿಯನ್ನು ಮುಗಿಸಿದ್ದೇವೆ. ಆಸ್ಟ್ರೇಲಿಯಾಗೆ ಮತ್ತೆ ಬರ್ತಿವಿ ಎಂಬುದರ ಬಗ್ಗೆ ನಮಗೆ ಖಚಿತವಿಲ್ಲ. ಇಷ್ಟು ವರ್ಷಗಳ ಕಾಲ ಆಡಿರುವುದಕ್ಕೆ ಖುಷಿಯಿದೆ. ಧನ್ಯವಾದ ಆಸ್ಟ್ರೇಲಿಯಾ" ಎಂದು ರೋಹಿತ್ ಶರ್ಮ ಹೇಳಿದರು.

ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 236 ರನ್‌ಗೆ ಆಲೌಟ್ ಆಯಿತು. ಮ್ಯಾಟ್ ರೆನ್‌ಶಾ (56 ರನ್​, 58 ಎಸೆತಗಳಲ್ಲಿ 2 ಬೌಂಡರಿ) ಆಸೀಸ್ ಪರ ಅರ್ಧಶತಕ ಗಳಿಸಿದರು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಕ್ಯಾಪ್ಟನ್ ಶುಭ್‌ಮನ್ ಗಿಲ್, ಕೇವಲ 24 ರನ್​ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಗಿಲ್ ವಿಕೆಟ್​ ಬೆನ್ನಲ್ಲೇ ರೋಹಿತ್ ಜತೆ ಅಖಾಡಕ್ಕಿಳಿದ ಕೊಹ್ಲಿ, ಆಕರ್ಷಕ ಅರ್ಧಶತಕ (ಅಜೇಯ 74) ಬಾರಿಸಿದರು. ಇನ್ನೂ ಶತಕದಾಟ ತೋರಿದ ರೋಹಿತ್​ 125 ಎಸೆತಗಳಲ್ಲಿ ಅಜೇಯ 121 ರನ್​ ಗಳಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net