

ಲಾಹೋರ್: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಸದ್ಯ ದೊಡ್ಡ ಮಟ್ಟದ ಚರ್ಚೆಗಳು ಹಾಗೂ ವಿವಾದಗಳೇ ಭುಗಿಲೆದಿದ್ದು, ಈ ಬಾರಿಯ ಅತಿಥ್ಯವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ವಹಿಸಿಕೊಂಡಿರುವುದು ಇಷ್ಟಕ್ಕೆಲ್ಲ ಕಾರಣ ಎನ್ನುವಂತಾಗಿದೆ. ತಂಡದಲ್ಲಿ ಯಾವ ಬೌಲರ್, ಬ್ಯಾಟರ್ ಹಾಗೂ ಆಲ್ರೌಂಡರ್ ಇದ್ದರೆ ನಮಗೆ ಗೆಲುವು ಬಹಳ ಸುಲಭವಾಗುತ್ತದೆ ಎಂಬುದನ್ನು ಯೋಚಿಸಬೇಕಿದ್ದ ಪಾಕ್, ಇಲ್ಲಿಯವರೆಗೂ ತಮ್ಮ ನೆಲಕ್ಕೆ ಪ್ರಯಾಣಿಸದ ಟೀಮ್ ಇಂಡಿಯಾವನ್ನು ಹೇಗಾದರೂ ಮಾಡಿ ಕರೆಸಿಕೊಳ್ಳಬೇಕು ಎಂಬ ಜಟಾಪಟಿಯಲ್ಲಿ ತೊಡಗಿದೆ. ಇದಕ್ಕಾಗಿ ನಾನಾ ರೀತಿಯ ಕಸರತ್ತು ಕೂಡ ನಡೆಸಿ, ಸದ್ಯ ಸೋತು ಸುಣ್ಣವಾಗಿದೆ. ಅಂತಿಮವಾಗಿ ಹೈಬ್ರಿಡ್ ಮಾದರಿಯಲ್ಲಿ ಆಡಿಸುವುದಾದರೆ ಮಾತ್ರ ಚಾಂಪಿಯನ್ಸ್ ಟ್ರೋಫಿ ಆಡುವುದಾಗಿ (Decision) ಭಾರತ ತಿಳಿಸಿದ್ದೇ ತಡ, ಇದೀಗ ಪಾಕ್ ಆಟಗಾರರಲ್ಲಿ ಕಿಡಿ ಚಿಮ್ಮುಲು ಶುರುವಾಗಿದೆ.
ಪ್ರತ್ಯೇಕವಾಗಿ ನಮ್ಮ ಪಂದ್ಯಗಳನ್ನು ದುಬೈಗೆ ವರ್ಗಾಯಿಸುವುದಾದರೆ ಮಾತ್ರ ಟೀಮ್ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದೆ. ಅತೀ ಮುಖ್ಯವಾಗಿ ಪಾಕಿಸ್ತಾನ ನೆಲದಲ್ಲಿ ಆಡಲು ನಮಗೆ ಭಾರತ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ನಾವು ಪಾಕ್ ನೆಲಕ್ಕೆ ಬರಲು ಇಚ್ಛಿಸುವುದಿಲ್ಲ ಎಂದು ಬಿಸಿಸಿಐ ನೇರವಾಗಿ ಐಸಿಸಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಭಾರತೀಯ ಕ್ರಿಕೆಟ್ ಮಂಡಳಿಯ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಪಿಸಿಬಿ ಹಾಗೂ ಪಾಕ್ನ ಮಾಜಿ ಕ್ರಿಕೆಟಿಗರು, ಭವಿಷ್ಯದಲ್ಲಿ ಭಾರತದಲ್ಲಿ ಆಡಬೇಕಾದ ಪಂದ್ಯಗಳನ್ನು ರದ್ದುಗೊಳಿಸಿ ಎಂದು ಕರೆ ನೀಡಿದ್ದಾರೆ. ಸದ್ಯ ಈ ಮಧ್ಯೆ ಪಾಕ್ ಆಟಗಾರ ಮೊಹಮ್ಮದ್ ಅಮೀರ್ ಕೂಡ ಟೀಮ್ ಇಂಡಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"2008ರಿಂದ ಪಾಕಿಸ್ತಾನ ಹಲವಾರು ಟೂರ್ನಿಗಾಗಿ ಭಾರತಕ್ಕೆ ಆಗಮಿಸಿ, ಆಟಕ್ಕೆ ಗೌರವ ನೀಡಿದೆ. ಆದರೆ, ಮೆನ್ ಇನ್ ಬ್ಲ್ಯೂ ಮಾತ್ರ ಇಲ್ಲಿಗೆ ಬರಲು ಕಿಂಚಿತ್ತು ಆಸಕ್ತಿ ತೋರುತ್ತಿಲ್ಲ ಎಂಬುದು ನಿಜಕ್ಕೂ ಖಂಡನೀಯ. ಇಂತಹ ಬೆಳವಣಿಗೆ ನಡೆಯಬಾರದಿತ್ತು. ಏಕೆಂದರೆ, ಇದು ಕ್ರಿಕೆಟ್ಗೆ ದೊಡ್ಡ ನಷ್ಟ ತರುತ್ತಿದೆ. ಯಾವುದೋ ಒಂದು ತಂಡಕ್ಕಾಗಿ ಉಳಿದೆಲ್ಲಾ ಟೀಮ್ಗಳು ಬಲಿಪಶು ಆಗುವುದು ಬೇಕಿಲ್ಲ. ಈ ಸಮಸ್ಯೆ ಬಗೆಹರಿಸಲು ಇರುವುದು ಒಂದೇ ಅಸ್ತ್ರ. ಯಾವ ತಂಡ ಇಲ್ಲಿಗೆ ಬರುವುದಿಲ್ಲ ಎಂದು ಹೇಳುತ್ತಿದೆಯೋ, ಆ ತಂಡವನ್ನೇ ಟೂರ್ನಿಯಿಂದ ಕೈಬಿಡುವುದು ಒಳಿತು" ಎಂದು ಕಿಡಿಕಾರಿದ್ದಾರೆ.
"ಟೀಮ್ ಇಂಡಿಯಾವನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಕಿತ್ತು ಬಿಸಾಡಿ, ಅವರ ಜಾಗಕ್ಕೆ ಬೇರೊಂದು ತಂಡವನ್ನು ಆಡಲು ಅವಕಾಶ ಮಾಡಿಕೊಡುವುದು ಉತ್ತಮ. ಇತರ ತಂಡಗಳು ಇಲ್ಲಿ ಸ್ಪರ್ಧಿಸಲು ಸಿದ್ಧವಾಗಿರುವಾಗ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸುವುದು ಹಾಸ್ಯಸ್ಪದ. ಕ್ರಿಕೆಟ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ತಮ್ಮ ಸರ್ಕಾರದ ಸದಸ್ಯ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಐಸಿಸಿಗೆ ಅಧಿಕಾರವಿದೆ. ಭಾರತೀಯ ಆಟಗಾರರು ಮತ್ತು ಅಭಿಮಾನಿಗಳು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ನೋಡಲು ಬಯಸುತ್ತಿದ್ದಾರೆ. ಆದರೆ ಭಾರತ ಸರ್ಕಾರ ಮಾತ್ರ ಅವರ ಆಸೆಯನ್ನು ಕಸಿದುಕೊಳ್ಳುತ್ತಿದೆ. ನಾವೆಲ್ಲರೂ ಜತೆಗೂಡಿ ಕ್ರಿಕೆಟ್ ಅನ್ನು ರಾಜಕೀಯದಿಂದ ದೂರವಿಡಬೇಕಾಗಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).