

ಜೊಹಾನ್ಸ್ರ್ಬಗ್: ಮಳೆ ಅಡಚಣೆಯ ನಡುವೆ ಹಿನ್ನಡೆ ಎದುರಿಸ ಮುಗ್ಗರಿಸಿದ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದ ಸವಾಲಿಗೆ ಸಜ್ಜಾಗಿದೆ. ವಾಂಡರರ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸುವ ಒತ್ತಡವನ್ನೂ ಸೂರ್ಯಕುಮಾರ್ ಯಾದವ್ ಪಡೆ ಎದುರಿಸುತ್ತಿದೆ.
ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದರೆ, 2ನೇ ಪಂದ್ಯದಲ್ಲಿ ಭಾರತೀಯ ಇನಿಂಗ್ಸ್ನ ಅಂತ್ಯದಲ್ಲಿ ಕಾಡಿದ ಮಳೆ ಓವರ್ ಕಡಿತಕ್ಕೆ ಕಾರಣವಾಯಿತು. ನಂತರದಲ್ಲಿ ಭಾರತೀಯ ಬೌಲರ್ಗಳು ಆರಂಭದಲ್ಲಿ ಹೆಚ್ಚಿನ ರನ್ಬಿಟ್ಟುಕೊಟ್ಟ ಕಾರಣ ಭಾರತ ಪರದಾಡುವಂತಾಯಿತು. ಎಡಗೈ ವೇಗಿ ಅರ್ಷದೀಪ್ ಸಿಂಗ್ ಹೆಚ್ಚಿನ ರನ್ ಬಿಟ್ಟುಕೊಟ್ಟರೆ, ಮುಕೇಶ್ ಕುಮಾರ್ ವಿಕೆಟ್ ಕಬಳಿಸಿದ ನಡುವೆಯೂ ರನ್ಗೆ ಕಡಿವಾಣ ಹಾಕಲಿಲ್ಲ. ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವಿಗಳ ಕೊರತೆಯೂ ಭಾರತವನ್ನು ಕಾಡಿತು.
ಇನ್ನು ಮಳೆ ನಂತರ ಒದ್ದೆಯಾಗಿದ್ದ ಮೈದಾನದಿಂದಾಗಿ ಸ್ಪಿನ್ನರ್ಗಳು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಫ್ರಿಕಾದ ಸ್ಪಿನ್ನರ್ ತಬರೇಜ್ ಶಮ್ಸಿಗೆ ಸಿಕ್ಕಷ್ಟು ನೆರವು ಭಾರತೀಯ ಸ್ಪಿನ್ನರ್ಗಳಿಗೆ ಸಿಗದಂತಾಯಿತು.
ಬಹುತೇಕ ಇದೇ ತಂಡದೊಂದಿಗೆ ಭಾರತ ಇತ್ತೀಚೆಗೆ ತವರಿನಲ್ಲಿ ಆಸ್ಟ್ರೆಲಿಯಾ ವಿರುದ್ಧ 4-1ರಿಂದ ಸರಣಿ ಗೆದ್ದಿತ್ತು. ಇದೀಗ ಹರಿಣಗಳ ವಿರುದ್ಧ ಸರಣಿ ಗೆಲುವು ಸಾಧಿಸಲು ಅವಕಾಶವಿಲ್ಲದಿದ್ದರೂ, ಸಮಬಲದ ಸಮಾಧಾನ ಕಾಣಲು ಪ್ರಯತ್ನಿಸಬಹುದಾಗಿದೆ. ಸವಾಲಿನ ಪ್ರವಾಸದ ಆರಂಭದಲ್ಲೇ ಸರಣಿ ಸೋಲುಂಡರೆ ಭಾರತ ಮಾನಸಿಕ ಹಿನ್ನಡೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಅದರಿಂದ ಪಾರಾಗಿ, ಮುಂಬರುವ ಏಕದಿನ-ಟೆಸ್ಟ್ ಸರಣಿಗಳಿಗೂ ಮಾನಸಿಕ ಬಲ ತುಂಬಲು ಯುವ ಭಾರತ ಹೋರಾಡಬೇಕಿದೆ.
ಬೌಲರ್ಗಳ ಅಸ್ಥಿರ ನಿರ್ವಹಣೆ
ಟಿ20 ವಿಶ್ವಕಪ್ಗೆ ಮುನ್ನ ಭಾರತ ತಂಡ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಪ್ರಯೋಗ ನಡೆಸುತ್ತಿದೆ. ಆದರೆ ಯುವ ಬೌಲರ್ಗಳ ಅಸ್ಥಿರ ನಿರ್ವಹಣೆ ಅವರಿಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹಿನ್ನಡೆಯಾಗಿದೆ. ಆಸೀಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಕೊನೇ ಟಿ20 ಪಂದ್ಯದ ಕೊನೇ ಓವರ್ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಅರ್ಷದೀಪ್, ಇತರ ಪಂದ್ಯಗಳಲ್ಲಿ ಅದೇ ಬಿಗಿ ದಾಳಿ ಸಂಟಿಸಿಲ್ಲ. ಇನ್ನು ಮುಕೇಶ್ ವಿಕೆಟ್ ಕಬಳಿಸುತ್ತಿದ್ದರೂ, ರನ್ಗೆ ನಿಯಂತ್ರಣ ಹೇರುವಲ್ಲಿ ಶಕ್ತರಾಗಿಲ್ಲ.
ಗಮನಸೆಳೆಯುತ್ತಿದೆ ರಿಂಕು ಆಟ
ಇತ್ತೀಚೆಗೆ ಭಾರತ ತಂಡಕ್ಕೆ ಕಾಲಿಟ್ಟ ಆಟಗಾರರಲ್ಲಿ ಗಮನಾರ್ಹ ಮತ್ತು ಸ್ಥಿರ ನಿರ್ವಹಣೆ ತೋರುತ್ತಿರುವ ಆಟಗಾರರಲ್ಲಿ ರಿಂಕು ಸಿಂಗ್ ಪ್ರಮುಖರು. ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡಕ್ಕೆ ಆಧಾರವಾಗಿ ನಿಲ್ಲುತ್ತಿರುವ ರಿಂಕು ಸಿಂಗ್, ಟಿ20 ವಿಶ್ವಕಪ್ಗೂ ಫಿನಿಷರ್ ಪಾತ್ರಕ್ಕೆ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ.
ಟೀಮ್ ನ್ಯೂಸ್:
ಭಾರತ: ಅನಾರೋಗ್ಯದಿಂದಾಗಿ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ಋತುರಾಜ್ ಗಾಯಕ್ವಾಡ್ ಫಿಟ್ ಆದರೆ, ಭಾರತಕ್ಕೆ ಆರಂಭಿಕರ ಆಯ್ಕೆ ತಲೆನೋವು ಎದುರಾಗಲಿದೆ. ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ ಶುಭಮಾನ್ ಗಿಲ್-ಯಶಸ್ವಿ ಜೈಸ್ವಾಲ್ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಎಡಗೈ&ಬಲಗೈ ಕಾಂಬಿನೇಷನ್ ಉಳಿಸಿಕೊಳ್ಳಲು ಗಿಲ್ ಹೊರಬೀಳಬಹುದು. ಕುಲದೀಪ್ ಯಾದವ್ ಬದಲಿಗೆ ವಿಶ್ವ ನಂ. 1 ಟಿ20 ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತೆ ಅವಕಾಶ ಪಡೆಯಬಹುದು. ದೀಪಕ್ ಚಹರ್ ಇನ್ನೂ ತಂಡ ಕೂಡಿಕೊಂಡಿರದ ಕಾರಣ ವೇಗದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ.
ದಕ್ಷಿಣ ಆಫ್ರಿಕಾ: ಸರಣಿಯ ಮೊದಲೆರಡು ಪಂದ್ಯಗಳಿಗೆ ಮಾತ್ರ ತಂಡದ ಭಾಗವಾಗಿದ್ದ ವೇಗಿಗಳಾದ ಗೆರಾಲ್ಡ್ ಕೋಟ್ಜೀ, ಮಾಕೋರ್ ಜಾನ್ಸೆನ್ ತಂಡವನ್ನು ತೊರೆದಿದ್ದಾರೆ. ಜತೆಗೆ ಲುಂಗಿ ಎನ್ಗಿಡಿ ಗಾಯಾಳು ಪಟ್ಟಿ ಸೇರಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಕೂಡ ಈ ಬಾರಿ ಅನನುಭವಿ ವೇಗದ ಬೌಲಿಂಗ್ ವಿಭಾಗದೊಂದಿಗೆ ಕಣಕ್ಕಿಳಿಯಬೇಕಾದ ಸವಾಲು ಎದುರಿಸುತ್ತಿದೆ. ಕೋಟ್ಜೀ ಸ್ಥಾನಕ್ಕೆ ಬಾರ್ಟ್ಮನ್/ರ್ಬಗರ್ ನಡುವೆ ಪೈಪೋಟಿ ಇದೆ. ಜಾನ್ಸೆನ್ ಸ್ಥಾನದಲ್ಲಿ ಡೊನೊವನ್ ಫೆರೀರ ಆಡುವ ನಿರೀೆ ಇದೆ.
ಆರಂಭ: ರಾತ್ರಿ 8.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಭಾರತಕ್ಕೆ ನೆಚ್ಚಿನ ತಾಣ
ದಕ್ಷಿಣ ಆಫ್ರಿಕಾದಲ್ಲಿ ಜೊಹಾನ್ಸ್ರ್ಬಗ್ ಭಾರತದ ಪಾಲಿಗೆ ನೆಚ್ಚಿನ ತಾಣವೆನಿಸಿದೆ. ಇಲ್ಲಿ ಮೂರೂ ಕ್ರಿಕೆಟ್ ಪ್ರಕಾರಗಳಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ಟಿ20ಯಲ್ಲೂ 3 ಜಯ, 1 ಸೋಲಿನ ದಾಖಲೆ ಹೊಂದಿದೆ. ಇನ್ನು ಮಳೆ ಭೀತಿ ಇಲ್ಲದ ಕಾರಣ ಸರಣಿಯಲ್ಲಿ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ನಡೆಯುವ ನಿರೀೆ ಇದೆ.