ಬೌಲರ್‌ಗಳಿಗೆ ಮಾಸ್ಕ್ ಕಡ್ಡಾಯಗೊಳಿಸಿ ಎಂದ ಮಿಸ್ಬಾ

masks_web
Published on

ಕರಾಚಿ: ಕರೊನಾ ವೈರಸ್ ಭೀತಿಯಿಂದ ವಿಶ್ವ ಕ್ರಿಕೆಟ್ ಚಟುವಟಿಕೆ ಸ್ತಬ್ಧಗೊಂಡಿದ್ದರೂ ಚೆಂಡಿಗೆ ಎಂಜಲು ಹಾಗೂ ಬೆವರು ತಿಕ್ಕುವುದನ್ನು ನಿಷೇಧಿಸುವುದರ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡರೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕಳೆದ ವಾರ ಬಿಡುಗಡೆ ಮಾಡಿದೆ. ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ಐಸಿಸಿ ಕ್ರಿಕೆಟ್ ಸಮಿತಿ ಶಿಾರಸು ಮಾಡಿರುವ ಮಾರ್ಗಸೂಚಿಗಳ ಬಗ್ಗೆ ಕ್ರಿಕೆಟ್ ವಲಯದಲ್ಲಿ ಬಗೆ ಬಗೆಯ ವ್ಯಾಖ್ಯಾನಗಳು ನಡೆಯುತ್ತಿವೆ. ಇದೀಗ ಪಾಕಿಸ್ತಾನದ ಮುಖ್ಯಕೋಚ್ ಮಿಸ್ಬಾ ಉಲ್ ಹಕ್, ಬೌಲರ್‌ಗಳಿಗೆ ಮಾಸ್ಕ್ ಕಡ್ಡಾಯಗೊಳಿಸಬೇಕು ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಎಂಜಲು, ಬೆವರು ಒರಸದೇ ಇರಲು ಸಾಧ್ಯವಿಲ್ಲ!

ಕ್ರಿಕೆಟಿಗರು ಆರಂಭಿಕ ದಿನಗಳಿಂದಲ್ಲೂ ಚೆಂಡಿಗೆ ಎಂಜಲು, ಬೆವರು ಒರೆಸುವುದು ಸಾಮಾನ್ಯ. ಇದು ಕ್ರಿಕೆಟಿಗರಿಗೆ ಹವ್ಯಾಸ ಕೂಡ ಆಗಿ ಹೋಗಿದೆ. ಒಂದು ವೇಳೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕೆಂದರೆ ಬೌಲರ್‌ಗಳಿಗೆ ಮಾಸ್ಕ್ ಅಥವಾ ಕೆಲವು ನಿರ್ಬಂಧಿತ ರಕ್ಷಾ ಕವಚಗಳ ಅವಶ್ಯಕತೆಯಿದೆ ಎಂದು ಪಾಕ್ ತಂಡದ ಮುಖ್ಯ ಆಯ್ಕೆಗಾರರೂ ಆಗಿರುವ ಮಿಸ್ಬಾ ವಾದವಾಗಿದೆ. ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕಾದರೆ, ಆಟಗಾರರಿಗೆ ಸಾಕಷ್ಟು ಸಮಯಬೇಕಾಗುತ್ತದೆ. ಜತೆಗೆ ಹೊಸ ನಿಯಮ ಬೌಲರ್‌ಗಳಿಗೆ ನಿರ್ವಹಣೆಗೂ ಕುತ್ತು ತರುತ್ತದೆ ಎಂದಿದ್ದಾರೆ.

ಮಾರ್ಗಸೂಚಿಗಳು ಇಂತಿವೆ

ಐಸಿಸಿ ಮಾರ್ಗಸೂಚಿಯಂತೆ, ತಂಡಗಳ ಮೇಲೆ ನಿಗಾವಹಿಸಲು ವೈದ್ಯಾಧಿಕಾರಿಗಳ ನೇಮಿಸುವುದು, ಸರಣಿ ಆರಂಭಕ್ಕೂ ಮುನ್ನ ಆಟಗಾರರಿಗೆ 14 ದಿನ ಐಸೋಲೇಷನ್ ಶಿಬಿರ ಕಡ್ಡಾಯ, ಓವರ್ ಮಾಡುವಾಗ ಅಂಪೈರ್‌ಗಳಿಗೆ ಕ್ಯಾಪ್, ಟವಲ್ ನೀಡುವಂತಿಲ್ಲ, ಅಭ್ಯಾಸದ ವೇಳೆ ಆಟಗಾರರ ನಡುವೆ 1.5 ಮೀಟರ್ ಅಂತರವಿರಬೇಕು, ಜತೆಗೆ ಅಭ್ಯಾಸದ ವೇಳೆ ಮೂತ್ರಕ್ಕೂ ಹೋಗುವಂತಿಲ್ಲ. ಹೀಗೆ ಹಲವು ಮಾರ್ಗಸೂಚಿಗಳನ್ನು ಐಸಿಸಿ ಕಳೆದ ಶುಕ್ರವಾರ ಬಿಡುಗಡೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net