ಏಷ್ಯಾಡ್​ನಲ್ಲಿ ಇಂದು ವೇಟ್​ಲಿಫ್ಟಿಂಗ್​ನಲ್ಲಿ ಪದಕ ನಿರೀಕ್ಷೆ; ಮೀರಾಬಾಯಿ, ಬಿಂದ್ಯಾರಾಣಿ ಮೇಲೆ ಭಾರತದ ಭರವಸೆ

wl web
Published on

ಹಾಂಗ್​ಝೌ: ಕಳೆದ ಒಲಿಂಪಿಕ್ಸ್​ ಮತ್ತು ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಪದಕದ ಖಾತೆ ತೆರೆದಿದ್ದ ವೇಟ್​ಲಿಫ್ಟರ್​ ಮೀರಾಬಾಯಿ ಚಾನು ಏಷ್ಯಾಡ್​ನಲ್ಲಿ ತುಸು ತಡವಾಗಿ ಕಣಕ್ಕಿಳಿಯುತ್ತಿದ್ದಾರೆ. ಶನಿವಾರದಿಂದ ವೇಟ್​ಲಿಫ್ಟಿಂಗ್​ ಸ್ಪರ್ಧೆಗಳು ನಡೆಯಲಿದ್ದು, ಕೇವಲ ಇಬ್ಬರು ಮಹಿಳಾ ಲಿಫ್ಟರ್​ಗಳೊಂದಿಗೆ ಅಭಿಯಾನ ಆರಂಭಿಸಲಿರುವ ಭಾರತ ಮೊದಲ ದಿನವೇ ಸ್ಪರ್ಧೆ ಮುಗಿಸಲಿದೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಮತ್ತು 55 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ ಕಣಕ್ಕಿಳಿಯಲಿದ್ದಾರೆ. ಪುರುಷರ ವಿಭಾಗದಲ್ಲಿ ಭಾರತದ ಯಾವುದೇ ಲಿಫ್ಟರ್​ ಸ್ಪರ್ಧಿಸುತ್ತಿಲ್ಲ.

ಚೀನಾ, ಉತ್ತರ ಕೊರಿಯಾ, ಥಾಯ್ಲೆಂಡ್​ ಲಿಫ್ಟರ್​ಗಳ ಪ್ರಬಲ ಸ್ಪರ್ಧೆಯ ನಡುವೆ ಮಣಿಪುರದ ತಾರೆ ಮೀರಾಬಾಯಿ ಏಷ್ಯಾಡ್​ ಪದಕದ ಬರ ನೀಗಿಸಲು ಪ್ರಯತ್ನಿಸಲಿದ್ದಾರೆ. ಮೀರಾ ಕ್ಲೀನ್​ ಆಂಡ್​ ಜರ್ಕ್​ನಲ್ಲಿ ಬಲಿಷ್ಠವಾಗಿದ್ದರೂ, ಸ್ನ್ಯಾಚ್​ನಲ್ಲಿ ಹೆಚ್ಚಿನ ಭಾರ ಎತ್ತಲು ಶಕ್ತರಾಗದಿರುವುದು ಹಿನ್ನಡೆಯಾಗಿದೆ. ಸ್ನ್ಯಾಚ್​ನಲ್ಲಿ 90 ಕೆಜಿಗಿಂತ ಅಧಿಕ ಭಾರ ಎತ್ತಬಲ್ಲ ನಾಲ್ವರು ಲಿಫ್ಟರ್​ಗಳು ಕಣದಲ್ಲಿದ್ದರೆ, ಮೀರಾ ಗರಿಷ್ಠ 88 ಕೆಜಿ ಭಾರ ಮಾತ್ರ ಎತ್ತಿದ್ದಾರೆ. ಹೀಗಾಗಿ ಮೀರಾಗೆ ಇಲ್ಲಿ ಪದಕ ಗೆಲ್ಲುವುದು ಒಲಿಂಪಿಕ್ಸ್​ಗಿಂತಲೂ ಕಠಿಣವಾಗಿರಲಿದೆ. ಅಲ್ಲದೆ ಮೀರಾ ಸ್ನ್ಯಾಚ್​ನಲ್ಲಿ 90 ಕೆಜಿಗಿಂತ ಅಧಿಕ ಭಾರ ಎತ್ತಿದರೆ ಮಾತ್ರ ಪದಕದ ನಿರೀಕ್ಷೆ ಇಡಬಹುದಾಗಿದೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಮತ್ತು ಕಾಮನ್ವೆಲ್ತ್​ ಗೇಮ್ಸ್​ನಲ್ಲಿ 2 ಬಾರಿ ಚಿನ ಗೆದ್ದಿರುವ 29 ವರ್ಷದ ಮೀರಾ, ಏಷ್ಯಾಡ್​ನಲ್ಲಿ ಒಮ್ಮೆಯೂ ಪದಕ ಗೆದ್ದಿಲ್ಲ. 2014ರಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರೆ, 2018ರಲ್ಲಿ ಗಾಯದಿಂದಾಗಿ ಸ್ಪರ್ಧಿಸಿರಲಿಲ್ಲ.

24 ವರ್ಷದ ಬಿಂದ್ಯಾರಾಣಿ ದೇವಿ ಇತ್ತೀಚೆಗೆ ಏಷ್ಯನ್​ ಚಾಂಪಿಯನ್​ಷಿಪ್​ನಲ್ಲಿ ರಜತ ಪದಕ ಗೆದ್ದಿದ್ದು, ಏಷ್ಯಾಡ್​ನಲ್ಲೂ ಅದನ್ನೇ ಪುನರಾವರ್ತಿಸುವ ಹಂಬಲದಲ್ಲಿದ್ದಾರೆ. ಚೀನಾ ತೈಪೆಯ ಚೆನ್​ ಗುವಾನ್​ ಲಿಂಗ್​ ಈ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಫೇವರಿಟ್​ ಎನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net