

ಬೆಂಗಳೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು, 'ಸೆಲ್ಫಿ ಪಾಯಿಂಟ್'ನಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಟೋಕಿಯೋ ಓಲಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ನಮ್ಮ ದೇಶದ ಕ್ರೀಡಾಪಟುಗಳನ್ನು ಬೆಂಬಲಿಸಿ, ಶುಭ ಹಾರೈಸಿದ್ದಾರೆ.
ವಿಧಾನಸೌಧದ ಪೂರ್ವಭಾಗದಲ್ಲಿರುವ ಮೆಟ್ಟಿಲುಗಳ ಮೇಲೆ ಅಳವಡಿಸಿರುವ ಸೆಲ್ಫಿ ಪಾಯಿಂಟ್ನಲ್ಲಿ ನಿಂತು ಸಚಿವರು ಫೋಟೋ ತೆಗೆಸಿಕೊಂಡರು. ಸಚಿವರ ಜೊತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತು ಆಯುಕ್ತ ಡಾ.ಗೋಪಾಲಕೃಷ್ಣ ಕೂಡ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಫೋಟೋ ಕ್ಲಿಕ್ಕಿಸಿಕೊಂಡರು.
ಒಲಂಪಿಕ್ಸ್ 2020 ಕ್ರೀಡಾಕೂಟವು ಜಪಾನಿನ ರಾಜಧಾನಿ ಟೋಕಿಯೋ ನಗರದಲ್ಲಿ, 2021 ರ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾರತದಿಂದ ಹಲವಾರು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ದೇಶದ ಹೆಮ್ಮೆಯ ಪ್ರತೀಕವಾಗಿರುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮತ್ತು ಭಾರತದ 130 ಕೋಟಿ ನಾಗರೀಕರು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಸೆಲ್ಫಿ ಪಾಯಿಂಟ್(Selfie Point)ಗಳನ್ನು ಅಳವಡಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಚಿವ ಡಾ.ನಾರಾಯಣಗೌಡ ಸೆಲ್ಫಿ ಪಾಯಿಂಟ್ನಲ್ಲಿ ನಿಂತು ಫೋಟೋಗೆ ಪೋಸ್ ನೀಡಿದರು.