ಈ ಸಲ ಏನ್​ ಬರೆದಿದ್ದೀಯಾ ತೋರಿಸು... ಕಾಲೆಳೆದ ಸೂರ್ಯ​, ವೈರಲ್​ ಆಯ್ತು ಅಭಿ ರಿಯಾಕ್ಷನ್! ​Suryakumar Yadav

​Suryakumar Yadav
Published on

Suryakumar Yadav : ಪ್ರಸಕ್ತ 18ನೇ ಐಪಿಎಲ್ ಸೀಸನ್​ ಭಾಗವಾಗಿ ಗುರುವಾರ (ಏಪ್ರಿಲ್​ 17) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಿತು. ಇದರಲ್ಲಿ ಮುಂಬೈ ತಂಡ ಗೆಲುವು ದಾಖಲಿಸಿತು. ಪ್ರತಿಬಾರಿ ಪಂದ್ಯ ನಡೆದಾಗ ಒಂದಲ್ಲ ಒಂದು ಕತೂಹಲಕಾರಿ ಅಥವಾ ಹಾಸ್ಯಮಯ ಸನ್ನಿವೇಶಗಳು ಕ್ರೀಡಾಂಗಣದಲ್ಲಿ ಜರುಗುತ್ತವೆ. ನಿನ್ನೆಯ ಪಂದ್ಯವೂ ಕೂಡ ಅಂಥದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಸ್ಟಾರ್ ಓಪನರ್ ಅಭಿಷೇಕ್ ಶರ್ಮ ಅವರ ಪ್ಯಾಂಟ್​ ಜೇಬನ್ನು ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಚೆಕ್​ ಮಾಡಿದರು. ಈ ರೀತಿ ಮಾಡಲು ಒಂದು ಕಾರಣವೂ ಇದೆ.

ಸನ್‌ರೈಸರ್ಸ್ ಹೈದರಾಬಾದ್ ಆಡಿದ ಈ ಹಿಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮ ಶತಕ ಬಾರಿಸಿ ಸಂಭ್ರಮಿಸಿದರು. ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಶತಕ ಗಳಿಸಿದ ಶರ್ಮ, ತಮ್ಮ ಜೇಬಿನಿಂದ ಒಂದು ಪತ್ರವನ್ನು ತೆಗೆದು, ಕ್ರೀಡಾಂಗಣದಲ್ಲಿದ್ದವರಿಗೆ ಪ್ರದರ್ಶಿಸಿ ಸಂಭ್ರಮಿಸಿದರು. ಆ ಸಣ್ಣ ಪತ್ರದಲ್ಲಿ "ಇದು ಆರೆಂಜ್ ಆರ್ಮಿಗಾಗಿ" ಎಂದು ಬರೆದಿತ್ತು. ಅಂದರೆ, ಆ ಶತಕವನ್ನು ಎಸ್​ಆರ್​ಎಚ್​ ಅಭಿಮಾನಿಗಳಿಗಾಗಿ ಅರ್ಪಿಸಿದರು.

ಈ ಪಂದ್ಯದ ಬಳಿಕ ಎಸ್‌ಆರ್‌ಎಚ್‌ನ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್, ಪ್ರಸಕ್ತ ಐಪಿಎಲ್ ಸೀಸನ್ ಪ್ರಾರಂಭವಾದಾಗಲೇ ಅಭಿಷೇಕ್ ಆ ಪತ್ರವನ್ನು ಬರೆದಿಟ್ಟುಕೊಂಡಿದ್ದರು. ಪ್ರತಿ ಪಂದ್ಯದಲ್ಲೂ ಆ ಪತ್ರವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದರು ಮತ್ತು ಅದು ಅಂತಿಮವಾಗಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹೊರಬಂದಿತು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಪಂದ್ಯದ ಸಮಯದಲ್ಲಿ ಅಭಿಷೇಕ್ ಶರ್ಮ ಜೇಬನ್ನು ಚೆಕ್​ ಮಾಡಿ ಕಾಲೆಳೆದರು. ಇಂದು ಏನಾದರೂ ಬರೆದಿದ್ದೀಯಾ ತೋರಿಸು ಎನ್ನುವ ಅರ್ಥದಲ್ಲಿ ಶರ್ಮ ಜೇಬನ್ನು ತಮಾಷೆಗಾಗಿ ಯಾದವ್​ ಚೆಕ್​ ಮಾಡಿ ನೋಡಿದರು. ಈ ವೇಳೆ ಅಭಿಷೇಕ್​ ನಕ್ಕು ಸುಮ್ಮನಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್​ ಸುರಿಮಳೆಗೈಯುತ್ತಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿತು. ಅಭಿಷೇಕ್ ಶರ್ಮ (40 ರನ್​, 28 ಎಸೆತ, 7 ಬೌಂಡರಿ) ಮತ್ತು ಹೆನ್ರಿಚ್ ಕ್ಲಾಸೆನ್ (37 ರನ್​ 28 ಎಸೆತ, 3 ಬೌಂಡರಿ, 2 ಸಿಕ್ಸರ್) ಎಸ್​ಆರ್​ಎಚ್​ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಪರ ವಿಲ್ ಜ್ಯಾಕ್ಸ್ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಬುಮ್ರಾ ಮತ್ತು ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ಬಳಿಕ ಮುಂಬೈ ತಂಡವು 18.1 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಮುಂಬೈ ಬ್ಯಾಟ್ಸ್‌ಮನ್‌ಗಳಾದ ರಯಾನ್ ರಿಕಲ್ಟನ್ (31 ರನ್​, 23 ಎಸೆತ, 5 ಬೌಂಡರಿ), ವಿಲ್ ಜಾಕ್ಸ್ (36 ರನ್​, 26 ಎಸೆತ, 3 ಬೌಂಡರಿಗಳು, 2 ಸಿಕ್ಸರ್‌), ಸೂರ್ಯಕುಮಾರ್ ಯಾದವ್ (26 ರನ್​, 15 ಎಸೆತ, 2 ಬೌಂಡರಿ, 2 ಸಿಕ್ಸರ್‌), ಮತ್ತು ರೋಹಿತ್ ಶರ್ಮ (26 ರನ್​, 16 ಎಸೆತ, 3 ಸಿಕ್ಸರ್‌) ಉತ್ತಮ ಪ್ರದರ್ಶನ ನೀಡಿದರು. ಎಸ್‌ಆರ್‌ಎಚ್ ಬೌಲರ್‌ಗಳಲ್ಲಿ ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟ್ ಪಡೆದರು. ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು. ಹರ್ಷಲ್ ಪಟೇಲ್ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net