ರೀಲ್ಸ್​​ಗಾಗಿ ನಡುರಸ್ತೆಯಲ್ಲಿ ಕುರ್ಚಿ ಮೇಲೆ ಕುಳಿತು ಟೀ ಕುಡಿಯುತ್ತಾ ಹುಚ್ಚಾಟ ಮೆರೆದ ಯುವಕನಿಗೆ ಬಿಗ್​ ಶಾಕ್​! Reels

Reels
Published on

Reels : ಇದು ಸಾಮಾಜಿಕ ಜಾಲತಾಣಗಳ ಯುಗ. ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಎಲ್ಲ ಯುವಕರು ಮೊಬೈಲ್​ ಮೋಡಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಫೋನಿನಲ್ಲಿ ಮಗ್ನರಾದರೆ ಸಾಕು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ.

ಇದಿಷ್ಟು ಒಂದು ಭಾಗವಾದರೆ, ಮತ್ತೊಂದೆಡೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ರೀಲ್ಟ್​, ಶಾರ್ಟ್ಸ್​ ಎಂಬ ವಿಡಿಯೋಗಳನ್ನು ಮಾಡುತ್ತಾರೆ. ರೀಲ್ಸ್​ ಉನ್ಮಾದದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಲು ಅಪಾಯವನ್ನು ತಮ್ಮ ಬಳಿಗೆ ಎಳೆದುಕೊಳ್ಳುತ್ತಿದ್ದಾರೆ. ರೈಲು ಹಳಿಗಳಲ್ಲಿ, ರಸ್ತೆಯಲ್ಲಿ ಹೀಗೆ ಅಪಾಯದ ಅಂಚಿನಲ್ಲಿ ನಿಂತು ವಿಡಿಯೋ ಮಾಡುತ್ತಿದ್ದಾರೆ. ಇತ್ತೀಚೆಗೆ ಯುವಕನೊಬ್ಬ ವಾಹನನಿಬಿಡಿ ರಸ್ತೆಯಲ್ಲಿ ರೀಲ್ಸ್​ ಮಾಡಿ ಹುಚ್ಚಾಟ ಮೆರೆದಿದ್ದಾನೆ.

ಇತ್ತೀಚೆಗೆ, ಬೆಂಗಳೂರು ನಗರ ಪೊಲೀಸರು ಮಾಡಿದ ಒಂದು ಟ್ವೀಟ್ ಜನರ ಗಮನ ಸೆಳೆದಿದೆ. ಇನ್​ಸ್ಟಾಗ್ರಾಂ ರೀಲ್‌ಗಾಗಿ ವಾಹನ ನಿಬಿಡ ರಸ್ತೆಯಲ್ಲಿ ಯುವಕನೊಬ್ಬ ಅತಿರೇಕತನ ಪ್ರದರ್ಶಿಸಿದ್ದಾನೆ. ರಸ್ತೆಯ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ಚಹಾ ಕುಡಿಯುತ್ತಾ ರೀಲ್ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿತ್ತು.

ಆ ಯುವಕ ಮಾಡಿದ ಸಾಹಸ ಅವನಿಗೆ ಮಾತ್ರವಲ್ಲ, ಅದು ಜನರ ಜೀವಕ್ಕೂ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇತ್ತು. ಆದ್ದರಿಂದ ಬೆಂಗಳೂರು ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು. ಹೇಗೋ ಆತನನ್ನು ಪತ್ತೆಹಚ್ಚಿ, ಬಂಧಿಸಿದ್ದಾರೆ. ಅಲ್ಲದೇ, ಯಾರೇ ಆಗಲಿ ಇಂತಹ ಅತಿರೇಕತನ ಕೆಲಸವನ್ನು ಮಾಡಿದರೆ, ಅವರನ್ನು ಕಂಬಿಗಳ ಹಿಂದೆ ಹಾಕುತ್ತೇವೆ ಎಂದು ಎಚ್ಚರಿಸಿರುವ ಸಿನಿಮಾದ ದೃಶ್ಯವೊಂದರ ತುಣಕನ್ನು ಜೋಡಿಸಿ, ವಿಡಿಯೋ ಹಂಚಿಕೊಂಡಿದ್ದಾರೆ.

ಬೆಂಗಳೂರು ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ, ಜಾಗರೂಕರಾಗಿರಿ ಎಂದು ಹೇಳುವ ತಮಾಷೆಯ ಪೋಸ್ಟ್ ಅನ್ನು ಬೆಂಗಳೂರು ನಗರ ಪೊಲೀಸರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net