

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಬ್ರಾಂಡ್ ಮೌಲ್ಯ 2023ರಲ್ಲಿ ಶೇ. 28 ಪ್ರಗತಿ ಕಂಡಿದ್ದು, 89,263 ಕೋಟಿ ರೂಪಾಯಿ ತಲುಪಿದೆ. ಇದರೊಂದಿಗೆ ತಂಡಗಳ ಬ್ರಾಂಡ್ ಮೌಲ್ಯ ಕೂಡ ಉತ್ತಮ ಪ್ರಗತಿ ಕಂಡಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗರಿಷ್ಠ 725 ಕೋಟಿ ರೂ. (87 ದಶಲಕ್ಷ ಡಾಲರ್) ಬ್ರಾಂಡ್ ಮೌಲ್ಯ ಹೊಂದಿರುವ ಐಪಿಎಲ್ ತಂಡವೆನಿಸಿದೆ.
ಮತ್ತೊಂದು 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ತಂಡ 675 ಕೋಟಿ ರೂ. (81 ದಶಲಕ್ಷ ಡಾಲರ್) ಬ್ರಾಂಡ್ ಮೌಲ್ಯ ಹೊಂದಿದೆ. ಕೋಲ್ಕತ ನೈಟ್ರೈಡರ್ಸ್ ತಂಡ 655 ಕೋಟಿ ರೂ. (78.6 ದಶಲಕ್ಷ ಡಾಲರ್) ಮತ್ತು ಆರ್ಸಿಬಿ ತಂಡ 582 ಕೋಟಿ ರೂ. (69.8 ದಶಲಕ್ಷ ಡಾಲರ್) ಬ್ರಾಂಡ್ ಮೌಲ್ಯದೊಂದಿಗೆ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದೆ. ಇದುವರೆಗೆ ಐಪಿಎಲ್ ಟ್ರೋಫಿ ಗೆಲ್ಲದಿರುವ ತಂಡಗಳ ಪೈಕಿ ಆರ್ಸಿಬಿ ಗರಿಷ್ಠ ಮೌಲ್ಯ ಹೊಂದಿದೆ.
2022ರ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ 2023ರಲ್ಲಿ ರನ್ನರ್ಅಪ್ ಸ್ಥಾನದ ನಡುವೆ 545 ಕೋಟಿ ರೂ. (65.4 ದಶಲಕ್ಷ ಡಾಲರ್) ಬ್ರಾಂಡ್ ಮೌಲ್ಯದೊಂದಿಗೆ ಶೇ. 38 ಪ್ರಗತಿ ಕಂಡು 5ನೇ ಸ್ಥಾನಕ್ಕೇರಿದೆ. ಲಖನೌ ಸೂಪರ್ಜೈಂಟ್ಸ್ ತಂಡ 392 ಕೋಟಿ ರೂ. (47 ದಶಲಕ್ಷ ಡಾಲರ್) ಬ್ರಾಂಡ್ ಮೌಲ್ಯದೊಂದಿಗೆ 9ನೇ ಸ್ಥಾನದಲ್ಲಿದೆ. ಎಲ್ಎಸ್ಜಿ ಬ್ರಾಂಡ್ ಮೌಲ್ಯ ಗರಿಷ್ಠ ಶೇ. 48 ಪ್ರಗತಿ ಕಂಡಿದೆ.
ಬ್ರಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ "ಬ್ರಾಂಡ್ ಫಿನಾನ್ಸ್ ರಿವೀಲ್ಸ್' ಸಿದ್ಧಪಡಿಸಿರುವ ವರದಿಯ ಪ್ರಕಾರ, ಐಪಿಎಲ್ ಬ್ರಾಂಡ್ ಮೌಲ್ಯ 2008ರ ಆರಂಭಿಕ ವರ್ಷದಿಂದ ಈಗ ಶೇ. 433ರಷ್ಟು ಪ್ರಗತಿ ಕಂಡಿದೆ. 2022ರಲ್ಲಿ ಐಪಿಎಲ್ 70,070 ಕೋಟಿ ರೂ. (8.4 ಬಿಲಿಯನ್ ಡಾಲರ್) ಬ್ರಾಂಡ್ ಮೌಲ್ಯ ಹೊಂದಿತ್ತು.
ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ
ಮುಂಬೈ ಇಂಡಿಯನ್ಸ್: 725 ಕೋಟಿ ರೂ.
ಚೆನ್ನೈ ಸೂಪರ್ಕಿಂಗ್ಸ್: 675 ಕೋಟಿ ರೂ.
ಕೋಲ್ಕತ ನೈಟ್ರೈಡರ್ಸ್: 655 ಕೋಟಿ ರೂ.
ಆರ್ಸಿಬಿ (ಬೆಂಗಳೂರು): 582 ಕೋಟಿ ರೂ.
ಗುಜರಾತ್ ಟೈಟಾನ್ಸ್: 545 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್: 534 ಕೋಟಿ ರೂ.
ರಾಜಸ್ಥಾನ ರಾಯಲ್ಸ್: 521 ಕೋಟಿ ರೂ.
ಸನ್ರೈಸರ್ಸ್ ಹೈದರಾಬಾದ್: 402 ಕೋಟಿ ರೂ.
ಲಖನೌ ಸೂಪರ್ಜೈಂಟ್ಸ್: 392 ಕೋಟಿ ರೂ.
ಪಂಜಾಬ್ ಕಿಂಗ್ಸ್: 377 ಕೋಟಿ ರೂ.