48 ವರ್ಷಗಳ ಕನಸು ನನಸಾಗಿಸುವ ತವಕ; ಇಂದಿನಿಂದ ಪುರುಷರ ಹಾಕಿ ವಿಶ್ವಕಪ್ ಹಣಾಹಣಿ | ಆತಿಥೇಯ ಭಾರತಕ್ಕೆ ಸ್ಪೇನ್ ಮೊದಲ ಎದುರಾಳಿ

's Hockey World Cup
Published on

ರೌರ್ಕೆಲಾ: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಕಂಚಿನ ಪದಕ ಮತ್ತು ಬರ್ವಿುಂಗ್​ಹ್ಯಾಂ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ರಜತ ಪದಕ ಜಯಿಸಿದ ಸಾಧನೆಯೊಂದಿಗೆ ಗತವೈಭವದ ದಿನಗಳನ್ನು ನೆನಪಿಸಿರುವ ಭಾರತದ ಪುರುಷರ ಹಾಕಿ ತಂಡ ಇದೀಗ 48 ವರ್ಷಗಳ ಬಳಿಕ ವಿಶ್ವಕಪ್ ಜಯಿಸುವ ಮೂಲಕ ಮತ್ತೆ ವಿಜೃಂಭಿಸಲು ಸಿದ್ಧಗೊಂಡಿದೆ. ಶುಕ್ರವಾರದಿಂದ ನಡೆಯಲಿರುವ 15ನೇ ಆವೃತ್ತಿಯ ಎಫ್​ಐಎಚ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ಸ್ಪೇನ್ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಭುವನೇಶ್ವರದಲ್ಲಿ ಅರ್ಜೆಂಟೀನಾ-ದಕ್ಷಿಣ ಆಫ್ರಿಕಾ ನಡುವೆ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ.

ಒಲಿಂಪಿಕ್ಸ್​ನಲ್ಲಿ 8 ಸ್ವರ್ಣ ಪದಕ ಮತ್ತು ವಿಶ್ವಕಪ್​ನಲ್ಲಿ ಒಮ್ಮೆ ಪ್ರಶಸ್ತಿ ಗೆದ್ದಿರುವ ಭಾರತ ಈ ಬಾರಿ ಟೂರ್ನಿಯ ಪೋಡಿಯಂ ಏರಬಲ್ಲ ತಂಡಗಳಲ್ಲಿ ಒಂದಾಗಿ ಕಣಕ್ಕಿಳಿಯಲಿದೆ. ಟೋಕಿಯೊ, ಬರ್ವಿುಂಗ್​ಹ್ಯಾಂ ಪದಕ ಸಾಧನೆಯ ಬಳಿಕ ತಂಡದ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ. ವಿಶ್ವ ನಂ. 5 ಭಾರತ, ಇತ್ತೀಚೆಗೆ ಫೇವರಿಟ್​ಗಳಲ್ಲಿ ಒಂದಾದ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯಲ್ಲೂ ಗಮನಾರ್ಹ ನಿರ್ವಹಣೆ ತೋರಿತ್ತು. 2019ರಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ ಗ್ರಹಾಂ ರೀಡ್ ತಂಡದಿಂದ ಅಮೋಘ ನಿರ್ವಹಣೆ ಹೊರಹೊಮ್ಮಿಸುತ್ತಿದ್ದು, ಈ ಬಾರಿ ವಿಶ್ವಕಪ್​ನಲ್ಲೂ ಅದು ಮುಂದುವರಿಯುವ ನಿರೀಕ್ಷೆ ಇದೆ. ಹರ್ವನ್​ಪ್ರೀತ್ ಸಿಂಗ್ ಉತ್ಸಾಹಿ ಆಟಗಾರರ ಬಳಗದ ಸಾರಥ್ಯ ವಹಿಸಿಕೊಂಡಿದ್ದಾರೆ. ಅವರೊಂದಿಗೆ ಗೋಲು ಕೀಪರ್ ಪಿಆರ್ ಶ್ರೀಜೇಶ್, ಮಿಡ್​ಫೀಲ್ಡರ್​ಗಳಾದ ಮನ್​ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಸ್ಟ್ರೈಕರ್ ಮಂದೀಪ್ ಸಿಂಗ್, ಪೆನಾಲ್ಟಿ ಕಾರ್ನರ್ ಕೂಡ ತೆಗೆದುಕೊಳ್ಳುವ ಡಿಫೆಂಡರ್ ಅಮಿತ್ ರೋಹಿದಾಸ್ ಮತ್ತು ಫಾರ್ವರ್ಡ್ ಆಕಾಶ್​ದೀಪ್ ಸಿಂಗ್ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲ ಆಟಗಾರರಾಗಿದ್ದಾರೆ.

ಡಿ ಗುಂಪಿನಲ್ಲಿರುವ ಭಾರತ ತಂಡ ಅಗ್ರಸ್ಥಾನದೊಂದಿಗೆ ನೇರವಾಗಿ ಕ್ವಾರ್ಟರ್​ಫೈನಲ್​ಗೇರುವುದು ಪ್ರಮುಖ ಗುರಿಯಾಗಿದೆ. ವಿಶ್ವ ನಂ. 6 ಸ್ಪೇನ್ ಗುಂಪಿನಲ್ಲಿ ಪ್ರಮುಖ ಸವಾಲೆನಿಸಿದೆ. ಈ ಬಾರಿ ಕನಿಷ್ಠ ಸೆಮಿಫೈನಲ್ ಹಂತಕ್ಕೇರುವುದು ಭಾರತ ತಂಡದ ಪ್ರಮುಖ ಧ್ಯೇಯವಾಗಿದೆ.

ಭಾರತ ತಂಡ ವಿಶ್ವಕಪ್ ಜಯಿಸಿದರೆ ಆಟಗಾರರಿಗೆ ಬಂಪರ್ ಬಹುಮಾನ

ಭಾರತ ತಂಡ 48 ವರ್ಷಗಳ ಬಳಿಕ ವಿಶ್ವಕಪ್ ಪ್ರಶಸ್ತಿ ಗೆಲುವಿನ ಕನಸು ನನಸಾಗಿಸಿಕೊಂಡರೆ ಆಟಗಾರರಿಗೆ ಭಾರಿ ಬಹುಮಾನದ ಹಣದ ಹೊಳೆ ಹರಿದು ಬರಲಿದೆ. ಭಾರತ ಟ್ರೋಫಿ ಗೆದ್ದರೆ ಎಲ್ಲ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ನೀಡಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಕಟಿಸಿದ್ದಾರೆ. ಹಾಕಿ ಇಂಡಿಯಾ ಎಲ್ಲ ಆಟಗಾರರಿಗೆ ತಲಾ 25 ಲಕ್ಷ ರೂ. ನೀಡುವುದಾಗಿ ಘೋಷಿಸಿದೆ. ಇದಲ್ಲದೆ ಬೆಳ್ಳಿ ಗೆದ್ದರೆ ತಲಾ 15 ಲಕ್ಷ ರೂ. ಮತ್ತು ಕಂಚು ಗೆದ್ದರೆ ತಲಾ 10 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದೆ. ಇದಲ್ಲದೆ ಎಲ್ಲ ಆಟಗಾರರಿಗೆ ಅವರ ತವರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದಲೂ ಬಹುಮಾನ ನಿರೀಕ್ಷಿಸಬಹುದು.

ಶ್ರೀಮಂತ ಹಾಕಿ ವಿಶ್ವಕಪ್

ಟೂರ್ನಿ ಆತಿಥ್ಯಕ್ಕಾಗಿ ಒಡಿಶಾ ಸರ್ಕಾರ ಬರೋಬ್ಬರಿ 1,098 ಕೋಟಿ ರೂ. ವ್ಯಯಿಸುತ್ತಿದೆ. ಈ ಮೂಲಕ ಇದು ಇದುವರೆಗಿನ ಅತ್ಯಂತ ಶ್ರೀಮಂತ ಹಾಕಿ ವಿಶ್ವಕಪ್ ಎನಿಸುತ್ತಿದೆ. 2018ರಲ್ಲಿ ಒಡಿಶಾ ಸರ್ಕಾರ 67 ಕೋಟಿ ರೂ. ವೆಚ್ಚದಲ್ಲಿ ವಿಶ್ವಕಪ್ ಆತಿಥ್ಯ ವಹಿಸಿತ್ತು. ಆದರೆ ಈ ಬಾರಿ ಅದಕ್ಕಿಂತ 16 ಪಟ್ಟು ಅಧಿಕ ವೆಚ್ಚ ಮಾಡಿದೆ. ಈ ಪೈಕಿ 875 ಕೋಟಿ ರೂ. ಮೊತ್ತವನ್ನು ರೌರ್ಕೆಲಾ ಮತ್ತು ಭುವನೇಶ್ವರ ಕ್ರೀಡಾಂಗಣದ ಅಭಿವೃದ್ಧಿಗಾಗಿ ವ್ಯಯಿಸಲಾಗಿದೆ. 75 ಕೋಟಿ ರೂ. ಮೊತ್ತವನ್ನು ಸಾರಿಗೆ, ಆಟಗಾರರ ವಸತಿ, ಮಾಧ್ಯಮ ಪ್ರಚಾರಕ್ಕೆ ವ್ಯಯಿಸಲಾಗಿದೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 16 ತಂಡಗಳನ್ನು ತಲಾ 4ರಂತೆ 4 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ರೌಂಡ್ ರಾಬಿನ್ ಮಾದರಿ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ ತಂಡ ನೇರವಾಗಿ ಕ್ವಾರ್ಟರ್​ಫೈನಲ್​ಗೇರಿದರೆ, 2-3ನೇ ಸ್ಥಾನ ಪಡೆದ ತಂಡಗಳು ಕ್ರಾಸ್​ಓವರ್​ನಲ್ಲಿ ಆಡಲಿವೆ. ಜನವರಿ 22ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ. ಜನವರಿ 24-25ರಂದು ಕ್ವಾರ್ಟರ್​ಫೈನಲ್, ಜನವರಿ 27ರಂದು ಸೆಮಿಫೈನಲ್ ಮತ್ತು ಜನವರಿ 29ರಂದು ಫೈನಲ್ ಪಂದ್ಯ ನಡೆಯಲಿವೆ.

ಭಾರತಕ್ಕೆ 1975ರಲ್ಲಿ ಏಕೈಕ ವಿಶ್ವಕಪ್ ಸಂಭ್ರಮ

ಭಾರತ ತಂಡ 1971ರಲ್ಲಿ ಕಂಚು ಮತ್ತು 1973ರಲ್ಲಿ ಬೆಳ್ಳಿ ಗೆದ್ದ ಬಳಿಕ 1975ರಲ್ಲಿ ಅಜಿತ್​ಪಾಲ್ ಸಿಂಗ್ ಸಾರಥ್ಯದಲ್ಲಿ ಏಕೈಕ ಬಾರಿ ಹಾಕಿ ವಿಶ್ವಕಪ್ ಜಯಿಸಿತ್ತು. ನಂತರದಲ್ಲಿ ಭಾರತ ಒಮ್ಮೆಯೂ ಸೆಮಿಫೈನಲ್​ಗೇರಿಲ್ಲ. 1978 ಮತ್ತು 2014ರಲ್ಲಿ ಗುಂಪು ಹಂತದಿಂದ ಮೇಲೇರಲು ವಿಫಲವಾಗಿತ್ತು. 2018ರ ಕೊನೇ ಆವೃತ್ತಿಯಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ಎಡವಿತ್ತು.

ಗುಂಪುಗಳು

ಎ: ಆಸ್ಟ್ರೇಲಿಯಾ, ಅರ್ಜೆಂಟೀನಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ.
ಬಿ: ಬೆಲ್ಜಿಯಂ, ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್.
ಸಿ: ಚಿಲಿ, ಮಲೇಷ್ಯಾ, ನೆದರ್ಲೆಂಡ್, ನ್ಯೂಜಿಲೆಂಡ್.
ಡಿ: ಭಾರತ, ಇಂಗ್ಲೆಂಡ್, ಸ್ಪೇನ್, ವೇಲ್ಸ್.

ಸುಸಜ್ಜಿತ ತಾಣಗಳು

ಭುವನೇಶ್ವರ: ಕಳಿಂಗ ಕ್ರೀಡಾಂಗಣ 16 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, 2018ರ ವಿಶ್ವಕಪ್ ಟೂರ್ನಿಗೂ ಆತಿಥ್ಯ ವಹಿಸಿಕೊಂಡಿತ್ತು. 2014ರಿಂದ ಭಾರತ ತಂಡದ ಬಹುತೇಕ ಪಂದ್ಯಗಳು ಇಲ್ಲೇ ನಡೆದಿವೆ. ಇಲ್ಲಿ ಟೂರ್ನಿಯ 24 ಪಂದ್ಯಗಳು ನಡೆಯಲಿವೆ.

ರೌರ್ಕೆಲಾ: ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ವಿಶ್ವಕಪ್ ಆತಿಥ್ಯಕ್ಕೆಂದೇ ಒಡಿಶಾ ಸರ್ಕಾರ, ರೌರ್ಕೆಲಾದಲ್ಲಿ 21 ಸಾವಿರ ಆಸನದ ವ್ಯವಸ್ಥೆಯ ವಿಶ್ವದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನಿಸಿದ ‘ಬಿರ್ಸಾ ಮುಂಡ ಹಾಕಿ ಸ್ಟೇಡಿಯಂ’ ನಿರ್ವಿುಸಿದೆ. ಇಲ್ಲಿ ಟೂರ್ನಿಯ 20 ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net