IPL 2024: ಮಯಾಂಕ್​ ಯಾದವ್​ ಎಸೆತದಷ್ಟೇ ವೇಗವಾಗಿ ಬೆಳೆಯಿತು ಜನಪ್ರಿಯತೆ!

web mayank web
Published on

ಲಖನೌ: ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್​ಜೈಂಟ್ಸ್​ ಪರ ಉರಿ ವೇಗದ ಎಸೆತಗಳಿಂದ ಗೆಲುವಿನ ರೂವಾರಿಯಾಗಿ ಹೊರಹೊಮ್ಮುವ ಮೂಲಕ ಗಮನಸೆಳೆದ ದೆಹಲಿಯ 21 ವರ್ಷದ ವೇಗಿ ಮಯಾಂಕ್​ ಯಾದವ್​, ಸಾಮಾಜಿಕ ಜಾಲತಾಣದಲ್ಲೂ ಅಷ್ಟೇ ವೇಗದ ಜನಪ್ರಿಯತೆ ಸಂಪಾದಿಸಿದ್ದಾರೆ.

ಐಪಿಎಲ್​ ಪದಾರ್ಪಣೆಗೆ ಮುನ್ನ ಇನ್​ಸ್ಟಾಗ್ರಾಂನಲ್ಲಿ 4 ಸಾವಿರ ಹಿಂಬಾಲಕರನ್ನು ಹೊಂದಿದ್ದ ಮಯಾಂಕ್​ ಈಗ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಗಂಟೆಗೆ 156 ಕಿಮೀ ವೇಗದ ಎಸೆತದೊಂದಿಗೆ 27 ರನ್​ಗೆ 3 ವಿಕೆಟ್​ ಕಬಳಿಸಿದ ಮಯಾಂಕ್​, ಕ್ರಿಕೆಟ್​ ವಲಯದಲ್ಲಿ "ರಾಜಧಾನಿ ಎಕ್ಸ್​ಪ್ರೆಸ್​' ಎಂದೇ ಹೆಸರಾದವರು.

ಆಸೀಸ್​ ಮಾಜಿ ವೇಗಿ ಬ್ರೆಟ್​ ಲೀ ಸಹಿತ ಹಲವು ಕ್ರಿಕೆಟ್​ ತಾರೆಯರು ಮಯಾಂಕ್​ ವೇಗದ ಎಸೆತವನ್ನು ಶ್ಲಾಘಿಸಿದ್ದಾರೆ. "ಕ್ರಿಕೆಟ್​ ಹೊರತಾಗಿಯೂ ನನಗೆ ವೇಗವೆಂದರೆ ಇಷ್ಟ. ರಾಕೆಟ್​, ಏರೋಪ್ಲೇನ್​, ಸೂಪರ್​ಬೈಕ್​ನ ವೇಗ ನನಗೆ ರೋಮಾಂಚನ ತರುತ್ತದೆ. ಬಾಲ್ಯದಿಂದಲೂ ಅವೇ ನನಗೆ ಪ್ರೇರಣೆ' ಎಂದು ದೆಹಲಿಯ ಪಂಜಾಬಿ ಬಾಘ್​ನ ಮಯಾಂಕ್​ ಹೇಳಿದ್ದಾರೆ. ಅವರು ಕಳೆದ ವರ್ಷವೇ ಲಖನೌ ಪರ ಐಪಿಎಲ್​ಗೆ ಪದಾರ್ಪಣೆ ಮಾಡಬೇಕಿತ್ತಾದರೂ, ಅಭ್ಯಾಸ ಪಂದ್ಯದಲ್ಲೇ ಗಾಯಗೊಂಡ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net