

ನವದೆಹಲಿ: ರೋಹಿತ್ ಶರ್ಮ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ನೇಮಕಗೊಂಡ ಬಳಿಕ ಟೀಕೆಗಳನ್ನು ಎದುರಿಸುತ್ತಲೇ ಬಂದಿರುವ ಹಾರ್ದಿಕ್ ಪಾಂಡ್ಯ, ಇದೀಗ ಐಪಿಎಲ್-17ರಲ್ಲಿ ಕಂಡ ಆರಂಭಿಕ 2 ಸೋಲಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಅಭಿಮಾನಿಗಳಿಂದ ಇನ್ನಷ್ಟು ನಿಂದನೆಗಳಿಗೆ ಗುರಿಯಾಗಿದ್ದಾರೆ. ಇಬ್ಬರು ಆಟಗಾರರ ಅಭಿಮಾನಿಗಳ ನಡುವಿನ ಈ ಜಗಳವನ್ನು ತನ್ನ ಯೂಟ್ಯೂಬ್ ಚಾನಲ್ನಲ್ಲಿ ಖಂಡಿಸಿರುವ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್, "ಅಭಿಮಾನಿಗಳ ನಡುವಿನ ಸಮರ ಇಂಥ ಕೆಟ್ಟ ಹಾದಿ ಹಿಡಿಯಬಾರದು. ಈ ಇಬ್ಬರೂ ಆಟಗಾರರು ನಮ್ಮ ದೇಶವನ್ನೇ ಪ್ರತಿನಿಧಿಸುತ್ತಾರೆ ಎಂಬುದನ್ನು ಮರೆಯಬಾರದು. ಇದು ಕ್ರಿಕೆಟ್. ಸಿನಿಮಾ ಸಂಸತಿಯನ್ನು ಇಲ್ಲಿಗೆ ತರಬೇಡಿ. ಇದರಲ್ಲಿ ಮಾರ್ಕೆಟಿಂಗ್, ಬ್ರಾ$್ಯಂಡಿಂಗ್ ಸಂಗತಿಗಳೂ ಇವೆ ಎಂಬುದು ನನಗೆ ತಿಳಿದಿದೆ' ಎಂದು ಹೇಳಿದ್ದಾರೆ.
ಅಭಿಮಾನಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ಬೇರೆ ಯಾವುದಾದರೂ ದೇಶದಲ್ಲಿ ಅಭಿಮಾನಿಗಳು ಈ ರೀತಿ ವರ್ತಿಸುವರೇ? ಜೋ ರೂಟ್-ಜಾಕ್ ಕ್ರೌಲಿ ಅಭಿಮಾನಿಗಳು ಅಥವಾ ಜೋ ರೂಟ್-ಜೋಸ್ ಬಟ್ಲರ್ ಅಭಿಮಾನಿಗಳು ಜಗಳವಾಡುವುದನ್ನು ನೋಡಿದ್ದೀರಾ? ಆಸ್ಟ್ರೆಲಿಯಾದಲ್ಲಿ ಸ್ಟೀವನ್ ಸ್ಮಿತ್-ಪ್ಯಾಟ್ ಕಮ್ಮಿನ್ಸ್ ಅಭಿಮಾನಿಗಳು ನಿಂದಿಸಿಕೊಳ್ಳುವರೇ ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.
ಧೋನಿ ಸಾರಥ್ಯದಲ್ಲಿ ದಿಗ್ಗಜರು ಆಡಿರಲಿಲ್ಲವೇ?
ಈ ಹಿಂದೆ ಟೀಮ್ ಇಂಡಿಯಾದಲ್ಲಿ ಸೌರವ್ ಗಂಗೂಲಿ ನಾಯಕತ್ವದಡಿಯಲ್ಲಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಗಂಗೂಲಿ, ಸಚಿನ್ ಆಡಿದ್ದರು. ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಈ ಮೂವರೂ ಆಡಿದ್ದರು. ಬಳಿಕ ಧೋನಿ ಸಾರಥ್ಯದಲ್ಲಿ ಮೂವರು ದಿಗ್ಗಜರೂ ಆಡಿದ್ದರು. ಆಗ ಇವರೆಲ್ಲರೂ ಯಾವುದೇ ಅಹಂ ತೋರದೆ ಆಡಿದ್ದರು ಎಂಬುದನ್ನೂ ಅಶ್ವಿನ್ ನೆನಪಿಸಿದ್ದಾರೆ. ನಿಮ್ಮ ನೆಚ್ಚಿನ ಆಟಗಾರನನ್ನು ಬೆಂಬಲಿಸಿ. ಅದಕ್ಕೆಂದು ಇನ್ನೋರ್ವ ಆಟಗಾರನನ್ನು ಅವಮಾನಿಸಬೇಡಿ ಎಂದೂ ರಾಜಸ್ಥಾನ ರಾಯಲ್ಸ್ ಆಟಗಾರ ಅಶ್ವಿನ್, ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.