ಕರ್ನಾಟಕಕ್ಕೆ ಮಯಾಂಕ್​ ಶತಕದಾಸರೆ; ಬಿಹಾರ ಎದುರು ಇನಿಂಗ್ಸ್​ ಮುನ್ನಡೆ; ಕೊನೇ ದಿನ ಗೆಲುವಿನಾಸೆ

web mayank
Published on

ಪಟನಾ: ನಾಯಕ ಮಯಾಂಕ್​ ಅಗರ್ವಾಲ್​ (105 ರನ್​, 131 ಎಸೆತ, 12 ಬೌಂಡರಿ) ಸಿಡಿಸಿದ ಆಕರ್ಷಕ ಶತಕದ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಆತಿಥೇಯ ಬಿಹಾರ ವಿರುದ್ಧ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. ಇದರಿಂದ ರಾಜ್ಯ ತಂಡಕ್ಕೆ ಪಂದ್ಯದಲ್ಲಿ ಕನಿಷ್ಠ 3 ಅಂಕ ಖಚಿತಗೊಂಡಿದ್ದು, 4ನೇ ಹಾಗೂ ಅಂತಿಮ ದಿನದಾಟದಲ್ಲಿ ಗೆಲುವು ದಾಖಲಿಸುವ ಅವಕಾಶವೂ ಸೃಷ್ಟಿಯಾಗಿದೆ.

ಮೊಯಿನ್​-ಉಲ್​-ಹಕ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಸೋಮವಾರ ಆಟ ತಡವಾಗಿ ಆರಂಭಗೊಂಡಾಗ ವಿಕೆಟ್​ ನಷ್ಟವಿಲ್ಲದೆ 16 ರನ್​ಗಳಿಂದ ಬ್ಯಾಟಿಂಗ್​ ಮುಂದುವರಿಸಿದ ಕರ್ನಾಟಕ ತಂಡ, ದಿನದಂತ್ಯಕ್ಕೆ 51 ಓವರ್​ಗಳಲ್ಲಿ 7 ವಿಕೆಟ್​ಗೆ 287 ರನ್​ ಗಳಿಸಿದೆ. ಕರ್ನಾಟಕ ಸದ್ಯ 144 ರನ್​ ಮುನ್ನಡೆಯಲ್ಲಿದೆ. ದಿನದ ಕೊನೇ ಓವರ್​ನಲ್ಲಿ 5 ಎಸೆತಗಳ ಅಂತರದಲ್ಲಿ, ಅಭಿನವ್​ ಮನೋಹರ್​, ಶತಕವೀರ ಮಯಾಂಕ್​ ಅಗರ್ವಾಲ್​ ಮತ್ತು ದಣ ಆಫ್ರಿಕಾ ಪ್ರವಾಸದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೇಗಿ ವೈಶಾಕ್​ ವಿಜಯ್​ಕುಮಾರ್​ (0) ಔಟಾಗಿದ್ದು, ರಾಜ್ಯಕ್ಕೆ ಅಂತಿಮ ದಿನ ಮುನ್ನಡೆಯನ್ನು ಇನ್ನಷ್ಟು ಹಿಗ್ಗಿಸಲು ತುಸು ಹೊಡೆತ ನೀಡಿದಂತಿದೆ. ಶ್ರೇಯಸ್​ ಗೋಪಾಲ್​ (1*) ಏಕಾಂಗಿಯಾಗಿ ಅಂತಿಮ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಮಯಾಂಕ್​ಗೆ ಮನೀಷ್​ ಸಾಥ್​

ಕ್ರಮವಾಗಿ 4 ಮತ್ತು 11 ರನ್​ಗಳಿಂದ ದಿನದಾಟ ಆರಂಭಿಸಿದ ಸುಜಯ್​ ಸಾತೇರಿ (10) ಮತ್ತು ನಿಕಿನ್​ ಜೋಸ್​ (16) ರಾಜ್ಯ ತಂಡದ ಮೊತ್ತ 41 ರನ್​ ಆಗುವಷ್ಟರಲ್ಲಿ ಯುವ ವೇಗಿ ಶಕೀಬ್​ ಹುಸೇನ್​ಗೆ ವಿಕೆಟ್​ ಒಪ್ಪಿಸಿದರು. ಆಗ ಜತೆಗೂಡಿದ ಮಯಾಂಕ್​ ಅಗರ್ವಾಲ್​ ಮತ್ತು ಆರ್​. ಸ್ಮರಣ್​ (37) 3ನೇ ವಿಕೆಟ್​ಗೆ 80 ರನ್​ ಸೇರಿಸಿ ಆಧರಿಸಿದರು. 13 ವರ್ಷದ ವೈಭವ್​ ಸೂರ್ಯವಂಶಿ, ಸ್ಮರಣ್​ರನ್ನು ಔಟ್​ ಮಾಡಿ ಈ ಜತೆಯಾಟವನ್ನು ಬೇರ್ಪಡಿಸಿದಾಗ ಮಯಾಂಕ್​ ಜತೆಗೂಡಿದ ಮತ್ತೋರ್ವ ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ (56), 4ನೇ ವಿಕೆಟ್​ಗೆ ಬಿರುಸಿನ ಆಟವಾಡಿ ಭರ್ತಿ 100 ರನ್​ ಸೇರಿಸಿದರು. ಮನೀಷ್​ ಔಟಾದ ಬಳಿಕ, ಪದಾರ್ಪಣೆಯ ಪಂದ್ಯದಲ್ಲಿ ಮೊದಲ ಬಾರಿ ಬ್ಯಾಟಿಂಗ್​ಗೆ ಇಳಿದ ಅಭಿನವ್​ ಮನೋಹರ್​ (37) ಕೂಡ ಬಿರುಸಿನ ಆಟವಾಡಿದರು. ಇವರಿಬ್ಬರು 5ನೇ ವಿಕೆಟ್​ಗೆ 47 ಎಸೆತಗಳಲ್ಲೇ 65 ರನ್​ ಕಸಿದರು. ಈ ನಡುವೆ ಮಯಾಂಕ್​ ಶತಕ ಪೂರ್ಣಗೊಳಿಸಿದರು. ಮಯಾಂಕ್​ ಅಗರ್ವಾಲ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸಿಡಿಸಿದ 18ನೇ ಶತಕ ಇದಾಗಿದೆ. ದಿನದ ಕೊನೇ ಓವರ್​ನಲ್ಲಿ ಲೆಗ್​ ಸ್ಪಿನ್ನರ್​ ಹಿಮಾಂಶು ಸಿಂಗ್​ ರಾಜ್ಯಕ್ಕೆ ತ್ರಿವಳಿ ಆಘಾತ ನೀಡಿದರು.

ಪೂರ್ಣ ಅಂಕ ಗಳಿಸುವ ಅವಕಾಶ

ಮತ್ತೆ ಮಳೆ ಅಡಚಣೆ ಎದುರಾಗದೆ ಅಂತಿಮ ದಿನ ಪೂರ್ಣ ಆಟ ನಡೆದರೆ ಕರ್ನಾಟಕ ತಂಡ ಇನಿಂಗ್ಸ್​ ಗೆಲುವಿನೊಂದಿಗೆ ಸಂಪೂರ್ಣ 7 ಅಂಕ ಕಲೆಹಾಕುವ ಅವಕಾಶ ಹೊಂದಿದೆ. ಸದ್ಯ 144 ರನ್​ ಮುನ್ನಡೆಯಲ್ಲಿದ್ದು, ಮಂಗಳವಾರ ಮತ್ತೆ 100-150 ರನ್​ ಸೇರಿಸಿ 200-250 ಪ್ಲಸ್​ ಮುನ್ನಡೆ ಸಾಧಿಸಿದರೆ, ಬಿಹಾರ ತಂಡವನ್ನು 2ನೇ ಇನಿಂಗ್ಸ್​ನಲ್ಲಿ ಬೇಗನೆ ಕಟ್ಟಿಹಾಕುವ ಮೂಲಕ ಇನಿಂಗ್ಸ್​ ಗೆಲುವು ದಾಖಲಿಸಬಹುದಾಗಿದೆ.

ಮಧ್ಯಾಹ್ನ ನಂತರ ಆಟ ಆರಂಭ

ಭಾನುವಾರ ದಿನವಿಡೀ ಮತ್ತು ರಾತ್ರಿಯೂ ಮಳೆ ಸುರಿಯದ ನಡುವೆಯೂ ಮೈದಾನ ಸೋಮವಾರ ಬೆಳಗ್ಗೆಯೂ ಒದ್ದೆಯಾಗಿಯೇ ಇತ್ತು. ಪ್ರಮುಖವಾಗಿ ಪಿಚ್​ ಸಮೀಪದ ಶಾರ್ಟ್​ ಕವರ್​ ಪ್ರದೇಶ ಹೆಚ್ಚು ಒದ್ದೆಯಾಗಿತ್ತು. ಇದರಿಂದಾಗಿ 3ನೇ ದಿನ ಆಟ ಆರಂಭ ವಿಳಂಬಗೊಂಡಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಕೊನೆಗೂ ಆಟ ಆರಂಭಗೊಂಡಿತು. ಸಂಜೆ ಮಂದಬೆಳಕಿನಿಂದ ಆಟ ಬೇಗನೆ ನಿಂತ ಕಾರಣ, 3ನೇ ದಿನದಾಟದಲ್ಲಿ ಗರಿಷ್ಠ 70 ಓವರ್​ ಆಡುವ ಯೋಜನೆ ಇದ್ದರೂ, 48 ಓವರ್​ ಆಟವಷ್ಟೇ ನಡೆಯಿತು.

ಅಂಪೈರ್ಸ್​ ಜತೆ ಮಯಾಂಕ್​ ವಾಗ್ವಾದ

ಮೈದಾನದ ಕಳಪೆ ನಿರ್ವಹಣೆಯ ಬಗ್ಗೆ ರಾಜ್ಯ ತಂಡದ ನಾಯಕ ಮಯಾಂಕ್​ ಅಗರ್ವಾಲ್​, ಅಂಪೈರ್​ಗಳು ಮತ್ತು ಮ್ಯಾಚ್​ ರೆಫ್ರಿ ಜತೆಗೆ ವಾಗ್ವಾದವನ್ನೂ ನಡೆಸಿದರು. ಬೆಳಗ್ಗೆ ಅಂಪೈರ್​ಗಳು ಪದೇಪದೆ ಮೈದಾನ ಪರಿಶೀಲಿಸುತ್ತಿದ್ದರೂ, ಆಟ ಆರಂಭಿಸುವ ಆಸಕ್ತಿ ತೋರಿರಲಿಲ್ಲ. ಹೀಗಾಗಿ ಮಯಾಂಕ್​ ಸಿಟ್ಟಾಗಿದ್ದರು.

ಬಿಹಾರ: 143, ಕರ್ನಾಟಕ: 51 ಓವರ್​ಗಳಲ್ಲಿ 7 ವಿಕೆಟ್​ಗೆ 287 (ನಿಕಿನ್​ ಜೋಸ್​ 16, ಸುಜಯ್​ 10, ಮಯಾಂಕ್​ ಅಗರ್ವಾಲ್​ 105, ಸ್ಮರಣ್​ 37, ಮನೀಷ್​ ಪಾಂಡೆ 56, ಅಭಿನವ್​ ಮನೋಹರ್​ 37, ಶ್ರೇಯಸ್​ 1*, ವೈಶಾಕ್​ 0, ಹಿಮಾಂಶು 51ಕ್ಕೆ 4, ಶಕಿಬ್​ 86ಕ್ಕೆ 2, ಸೂರ್ಯವಂಶಿ 21ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net