ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಇದೇ ಕಾರಣ! ಇದೊಂದು ಮಿಸ್ಟೇಕ್ ಸರಿಯಾದರೆ 'ಕಿಂಗ್' ಇಸ್​ ಬ್ಯಾಕ್​

Untitled design - 2024-06-25T171652.737
Published on

ನವದೆಹಲಿ: ಪ್ರಸಕ್ತ ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್ 8 ಹಂತದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತ ಬಂದಿದ್ದು, ಇದೀಗ ಸೆಮಿಫೈನಲ್​ಗೂ ಲಗ್ಗೆಯಿಟ್ಟಿದೆ. ತಂಡದ ನಾಯಕನಾಗಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ರೋಹಿತ್​ಗೆ ಟೀಮ್​ನ ಸಹ ಆಟಗಾರರು ಸಖತ್ ಸಾಥ್ ಕೊಡುತ್ತಿದ್ದಾರೆ. ತಂಡವಾಗಿ ಎದುರಾಳಿಗಳ ಬೆವರಿಳಿಸುತ್ತಿರುವ ಭಾರತಕ್ಕೆ ಓಪನಿಂಗ್ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಅವರ ಸ್ಫೋಟಕ ಇನ್ನಿಂಗ್ಸ್​ ಮಾತ್ರ ಜತೆಗಿಲ್ಲದಂತಾಗಿದೆ.

ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, 'ರನ್ ಮಷಿನ್'​ ವಿರಾಟ್ ಕೊಹ್ಲಿ ಸದ್ಯ ಟಿ20 ವಿಶ್ವಕಪ್ ತಂಡದಲ್ಲಿದ್ದರು ಸಹ ಇಲ್ಲದಂತೆ ಇರುವುದು ಅಪಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಇದಕ್ಕೆ ಕಾರಣ ಸತತ ಕಳಪೆ ಪ್ರದರ್ಶನ. ಹೌದು, ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಮೊದಲ ಪಂದ್ಯದಿಂದಲೂ ರೋಹಿತ್ ಶರ್ಮ ಅವರೊಟ್ಟಿಗೆ ಓಪನಿಂಗ್​ ಬರುತ್ತಿರುವ ವಿರಾಟ್, ಉತ್ತಮ ಪರ್ಫಾಮೆನ್ಸ್ ಕೊಡದೆ ಡಕ್ ಔಟ್​ ಆಗಿ ಪೆವಿಲಿಯನ್​ನತ್ತ ಮುಖ ಮಾಡುತ್ತಿರುವುದು ಕ್ರಿಕೆಟ್ ದಿಗ್ಗಜರಿಗೆ ಭಾರೀ ಅಚ್ಚರಿ ಮೂಡಿಸಿದೆ.

ಪಾಕಿಸ್ತಾನ, ನ್ಯೂಯಾರ್ಕ್​, ಯುಎಸ್​ಎ, ಆಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಕೊಹ್ಲಿ ಮೈದಾನಕ್ಕಿಳಿದರೆ ರನ್​ಗಳ ಸುರಿಮಳೆ ಖಚಿತ ಎಂದೇ ನಿರೀಕ್ಷಿಸುವ ಕ್ರಿಕೆಟ್ ಫ್ಯಾನ್ಸ್​, ವಿರಾಟ್​ ಅವರ ಈ ಪ್ರದರ್ಶನವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಕಳೆದ ಐಪಿಎಲ್​ ಲೀಗ್​ನಲ್ಲಿ ಆರ್​ಸಿಬಿ ಪರ ಓಪನಿಂಗ್ ಬಂದ ವಿರಾಟ್​, ಅತ್ಯಧಿಕ ರನ್​ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್​ಗೆ ಅರ್ಹರಾದರು. ಈ ಮೂಲಕ ಅತ್ಯುತ್ತಮ ಫಾರ್ಮ್​ ಉಳಿಸಿಕೊಂಡಿದ್ದ ರನ್​ ಮಷಿನ್,​ ಮುಂದಿನ ಟಿ20 ವಿಶ್ವಕಪ್​ನಲ್ಲಿಯೂ ಇದೇ ರೀತಿ ಓಪನಿಂಗ್ ಆಡಿದರೆ, ತಂಡಕ್ಕೆ ದೊಡ್ಡ ಕೊಡುಗೆ ಸಿಗಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಆಕ್ಷೇಪಣೆ ಕೂಡ ವ್ಯಕ್ತಪಡಿಸಿದ್ದರು.

ವಿರಾಟ್ ಕೊಹ್ಲಿ ಎಂದಿನಂತೆ ತಂಡದ ಪರ ಮೂರನೇ ಕ್ರಮಾಂಕದಲ್ಲಿಯೇ ವಿಶ್ವಕಪ್ ಪಂದ್ಯಗಳನ್ನು ಆಡಲಿ. ರೋಹಿತ್ ಜತೆ ಓಪನಿಂಗ್ ಹೋಗುವುದು ಬೇಡ. ಶರ್ಮ ಅವರೊಟ್ಟಿಗೆ ಯಶಸ್ವಿ ಜೈಸ್ವಾಲ್​ ಅವರನ್ನು ಆರಂಭಿಕ ಬ್ಯಾಟ್ಸ್​ಮನ್ ಆಗಿ ಕಳಿಸುವುದು ಉತ್ತಮ. ಕೊಹ್ಲಿ ಮೂರನೇ ಆರ್ಡರ್​ನಲ್ಲಿ ಬರುವುದೇ ಸರಿ. ಆಗ ಅವರ ಸ್ಫೋಟಕ ಪ್ರದರ್ಶನ, ಆಕರ್ಷಕ ಬ್ಯಾಟಿಂಗ್ ವೈಖರಿ ನೋಡಲು ಸಾಧ್ಯವಾಗುತ್ತದೆ ಎಂದು ಮಾಜಿ ಕ್ರಿಕೆಟಿಗರು ಅಂದೇ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದರು. ಪ್ರಸ್ತುತ ಈ ಮಾತುಗಳು ನಿಜವಾಗಿದ್ದು, ವಿರಾಟ್ ಅವರ ಕಳಪೆ ಪ್ರದರ್ಶನಕ್ಕೆ ಟಾಪ್ ಆರ್ಡರ್​ ಕಾರಣ ಎಂದೇ ಹೇಳಲಾಗುತ್ತಿದೆ.

ಇದನ್ನು ಗಮನಿಸಿ ಹೇಳುವುದಾದರೆ, ವಿರಾಟ್ ಮೂರನೇ ಕ್ರಮಾಂಕದಲ್ಲಿ ಬರುವುದು ಸರಿ. ಎಂದಿನಂತೆ ದಾಖಲೆಗಳ ಸರದಾರ ತಮ್ಮ ಬ್ಯಾಟ್​ನಿಂದ ಸಿಡಿಸುವ ರನ್​ಗಳನ್ನು ನೋಡುವುದೇ ಒಂದು ಖುಷಿ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿರಾಟ್​ರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸಲಿ ಎಂದು ಕೊಹ್ಲಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net