ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಭಾರತಕ್ಕೆ 'ಶಾಶ್ವತ ಫಿಕ್ಸರ್': PCB ಮಾಜಿ ಅಧ್ಯಕ್ಷ ರಮೀಜ್ ರಾಜಾ ಆರೋಪ

Untitled design - 2025-09-18T082007.724
Published on

PCB : ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ‘ನೋ-ಶೇಕ್‌ಹ್ಯಾಂಡ್’ ವಿವಾದ ಕ್ರಿಕೆಟ್ ವಲಯದಲ್ಲಿ ಇದೀಗ ಬಿಸಿ ಬಿಸಿ ವಿಷಯವಾಗಿದೆ. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಜಿ ಅಧ್ಯಕ್ಷ ರಮೀಜ್ ರಾಜಾ ಬುಧವಾರ(ಸೆ.17) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹೌದು, ಐಸಿಸಿ ನೇಮಿಸಿದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ವಾಗ್ದಾಳಿ ನಡೆಸಿ, ಭಾರತೀಯ ತಂಡದ ಬಗ್ಗೆ ಪಕ್ಷಪಾತ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಬುಧವಾರ ಪಿಸಿಬಿ ಪ್ರಧಾನ ಕಚೇರಿಯ ಹೊರಗೆ ಮಾಧ್ಯಮ ಜೊತೆ ಮಾತನಾಡಿದ ರಾಜಾ, ಪೈಕ್ರಾಫ್ಟ್ 90 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರು (ಪೈಕ್ರಾಫ್ಟ್) ಭಾರತಕ್ಕೆ "ಶಾಶ್ವತ ಫಿಕ್ಸರ್" ಆಗಿದ್ದಾರೆ ಎಂದು ರಾಜಾ ಗಂಭೀರ ಆರೋಪ ಮಾಡಿದ್ದಾರೆ.

"ಇದು ನಮಗೆ ಒಂದು ಗೆಲುವು. ಇದು ನಿರ್ಣಾಯಕ ಪರಿಸ್ಥಿತಿಯಾಗಿತ್ತು. ಭಾವನೆಗಳು ಉತ್ತುಂಗಕ್ಕೇರಿದ್ದವು. ನಾವು ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳದಿದ್ದಕ್ಕೆ ನನಗೆ ಸಂತೋಷವಾಗಿದೆ. ನಾವು ಬಹಿಷ್ಕಾರದ ನಿರ್ಧಾರವನ್ನು ತೆಗೆದುಕೊಂಡಿದ್ದರೆ ನಮ್ಮ ಕ್ರಿಕೆಟ್ ಹಾನಿಗೊಳಗಾಗುತ್ತಿತ್ತು. ನಾನು ಯಾವಾಗಲೂ ಇದನ್ನು ನಂಬಿದ್ದೇನೆ, ಎಲ್ಲಾ ಮಾತುಕತೆಗಳನ್ನು ನಮ್ಮ ಕ್ರಿಕೆಟ್ ತಂಡವೇ ಮಾಡಬೇಕು. ಹತಾಶೆಯನ್ನು ಮೈದಾನದಲ್ಲಿ ತೋರಿಸಬೇಕು ಮತ್ತು ಅದು ನಮಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸ್ಫೂರ್ತಿ ನೀಡಬೇಕು." ಎಂದಿದ್ದಾರೆ.

ಭಾರತ ತಂಡದ ನಾಯಕ ಭಾರತೀಯ ಸಶಸ್ತ್ರ ಪಡೆಗಳಿಗೆ ಗೆಲುವನ್ನು ಅರ್ಪಿಸಿದ್ದನ್ನು ಉಲ್ಲೇಖಿಸಿ, ಸೂರ್ಯಕುಮಾರ್ ಅವರ ಪಂದ್ಯದ ನಂತರದ ಸಂದರ್ಶನದ ಹೇಳಿಕೆಗಳು ಮತ್ತು ಪಹಲ್ಗಾಮ್ ದಾಳಿಯ ಕುರಿತಾದ ಹೇಳಿಕೆಯಿಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ನಿರಾಶೆಗೊಂಡಿದ್ದೇನೆ ಎಂದು ಹೇಳಿದರು.

ದುಬೈನಲ್ಲಿ ಭಾನುವಾರ (ಸೆ.14) ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ, ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದ ಬಳಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಭಾರತೀಯ ತಂಡ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿತು. ಕೈಕುಲುಕದೆ ನೇರವಾಗಿ ಡ್ರೆಸ್ಸಿಂಗ್ ಕೋಣೆಗೆ ಹೋದರು. ಈ ಪ್ರಕ್ರಿಯೆಯಲ್ಲಿ ತಮಗೆ ಅವಮಾನವಾಗಿದೆ ಎಂದು ಆರೋಪಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡುವ ಹಂತಕ್ಕೂ ಹೋಯಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net