ವರುಣ್ ಟಿ20 ಬೌಲಿಂಗ್ 'ಚಕ್ರವರ್ತಿ'; ಐಸಿಸಿ ರ‍್ಯಾಕಿಂಗ್​ನಲ್ಲಿ ಹೊಸ ವಿಶ್ವ ನಂ. 1 ಬೌಲರ್

Untitled design (7) (1)
Published on

ದುಬೈ: ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಐಸಿಸಿ ಟಿ20 ರ್ಯಾಂಕಿಂಗ್​ನಲ್ಲಿ ಹೊಸ ವಿಶ್ವ ನಂ. 1 ಬೌಲರ್ ಎನಿಸಿದ್ದಾರೆ. ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡುವ ಮೂಲಕ ಅವರು, ಟಿ20ಯಲ್ಲಿ ವಿಶ್ವ ನಂ.1 ಪಟ್ಟಕ್ಕೇರಿದ 3ನೇ ಭಾರತೀಯ ಬೌಲರ್ ಎನಿಸಿದ್ದಾರೆ.

ಜಸ್​ಪ್ರೀತ್ ಬುಮ್ರಾ ಮತ್ತು ರವಿ ಬಿಷ್ಣೋಯಿ ಮೊದಲಿಬ್ಬರು ಸಾಧಕರಾಗಿದ್ದಾರೆ. ಕಳೆದ ಫೆಬ್ರವರಿಯಿಂದ 2ನೇ ಸ್ಥಾನದಲ್ಲಿದ್ದ 34 ವರ್ಷದ ಚಕ್ರವರ್ತಿ, ಏಷ್ಯಾಕಪ್​ನಲ್ಲಿ ಯುಎಇ ವಿರುದ್ಧ 4 ರನ್​ಗೆ 1 ವಿಕೆಟ್ ಮತ್ತು ಪಾಕಿಸ್ತಾನ ವಿರುದ್ಧ 24 ರನ್​ಗೆ 1 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್​ನ ಜೇಕಬ್ ಡಫಿ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು. ಡಫಿ ಕಳೆದ ಮಾರ್ಚ್ ನಿಂದಲೂ ಅಗ್ರಸ್ಥಾನದಲ್ಲಿದ್ದರು. ಭಾರತ ಟಿ20 ತಂಡದ ಪ್ರಮುಖ ಸದಸ್ಯರಾದ 12 ತಿಂಗಳಲ್ಲೇ ಚಕ್ರವರ್ತಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಆಡಿದ 20 ಟಿ20 ಪಂದ್ಯಗಳಲ್ಲೇ (35 ವಿಕೆಟ್) ಅಗ್ರಪಟ್ಟ ಅಲಂಕರಿಸಿದ್ದಾರೆ. ಏಷ್ಯಾಕಪ್​ನ ಆರಂಭಿಕ 2 ಪಂದ್ಯಗಳಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮತ್ತೋರ್ವ ಸ್ಪಿನ್ನರ್ ಕುಲದೀಪ್ ಯಾದವ್ 16 ಸ್ಥಾನ ಬಡ್ತಿ ಪಡೆಯುವ ಮೂಲಕ 23ನೇ ಸ್ಥಾನಕ್ಕೇರಿದ್ದರೆ, ಅಕ್ಷರ್ ಪಟೇಲ್ 13ರಿಂದ 12ನೇ ಸ್ಥಾನಕ್ಕೇರಿದ್ದಾರೆ. ಬುಮ್ರಾ 4 ಸ್ಥಾನ ಬಡ್ತಿ ಪಡೆದು 40ನೇ ಸ್ಥಾನಕ್ಕೇರಿದ್ದಾರೆ.

ಭಾರತದ 6ನೇ ನಂ.1

ವರುಣ್ ಚಕ್ರವರ್ತಿ ಅಗ್ರಸ್ಥಾನಕ್ಕೇರುವುದರೊಂದಿಗೆ ವಿವಿಧ ವಿಭಾಗದ ಐಸಿಸಿ ರ್ಯಾಂಕಿಂಗ್​ನಲ್ಲಿ ಪ್ರಸಕ್ತ ಒಟ್ಟು 6 ಭಾರತೀಯರು ಏಕಕಾಲದಲ್ಲಿ ಅಗ್ರಸ್ಥಾನ ಅಲಂಕರಿಸಿದಂತಾಗಿದೆ. ಟಿ20 ಬ್ಯಾಟಿಂಗ್​ನಲ್ಲಿ ಅಭಿಷೇಕ್ ಶರ್ಮ, ಆಲ್ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಈಗಾಗಲೆ ನಂ. 1 ಪಟ್ಟದಲ್ಲಿದ್ದರೆ, ಏಕದಿನ ಬ್ಯಾಟಿಂಗ್​ನಲ್ಲಿ ಶುಭಮಾನ್ ಗಿಲ್, ಟೆಸ್ಟ್ ಬೌಲಿಂಗ್​ನಲ್ಲಿ ಜಸ್​ಪ್ರೀತ್ ಬುಮ್ರಾ, ಟೆಸ್ಟ್ ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ನಂ. 1 ಪಟ್ಟದಲ್ಲಿದ್ದಾರೆ. ಭಾರತ ಐಸಿಸಿ ಏಕದಿನ ಮತ್ತು ಟಿ20 ತಂಡ ರ್ಯಾಂಕಿಂಗ್​ನಲ್ಲೂ ಅಗ್ರಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net