ಮಾರ್ನಸ್ ಲಬುಶೇನ್ ಹಿಡಿದ ಕ್ಯಾಚ್​ ಅನ್ನು ನಾಟ್​ ಔಟ್​ ಎಂದು ಪರಿಗಣಿಸಲು ನೆಟ್ಟಿಗರ ಒತ್ತಾಯ!

Catch 11
Published on

ಸಿಡ್ನಿ: ಶೆಫಿಲ್ಡ್​ ಶೀಲ್ಡ್​ ದೇಶಿ ಪಂದ್ಯಾವಳಿಯಲ್ಲಿ ಕ್ವೀನ್ಸ್​ಲ್ಯಾಂಡ್​ ಪರ ಆಡುತ್ತಿರುವ ಆಸಿಸ್​ ಕ್ರಿಕೆಟಿಗ ಮಾರ್ನಸ್ ಲಬುಶೇನ್, ನ್ಯೂ ಸೌಥ್​ ವೇಲ್ಸ್​ ವಿರುದ್ಧ ಪಂದ್ಯದ ವೇಳೆ ಹಿಡಿದಂತಹ ಕ್ಯಾಚ್​ ಟ್ವಿಟ್ಟಿಗರನ್ನು ಗೊಂದಲಕ್ಕೆ ದೂಡಿದ್ದು, ಅನೇಕರು ಔಟೆಂದು ಪರಿಗಣಿಸದಿರಿ ಎಂದು ಒತ್ತಾಯಿಸಿದ್ದಾರೆ.

ಮಿಚೆಲ್​ ಸ್ವೆಪ್ಸನ್​ ಅವರ ಬೌಲಿಂಗ್​ನಲ್ಲಿ ನ್ಯೂ ಸೌಥ್​ ವೇಲ್ಸ್​ ತಂಡದ ಆಟಗಾರ ಬಾಕ್ಸ್​ಟರ್​ ಹಾಲ್ಟ್​ ಬ್ಯಾಟ್​ನಿಂದ ಎಡ್ಜ್​ ಆಗುವ ಚೆಂಡು ಲಬುಶೇನ್ ಕಡೆಗೆ ಸಾಗುತ್ತದೆ. ಹಿಂದಿನಿಂದ ಓಡಿ ಹೋಗಿ ಲಬುಶೇನ್​ ಕ್ಯಾಚ್​ ಹಿಡಿಯುತ್ತಾರೆ. ಈ ವೇಳೆ ಮುಗ್ಗರಿಸಿ ಬೀಳಬಹುದೆಂದು ಲಬುಶೇನ್​ ಕೈಯಲ್ಲಿದ್ದ ಚೆಂಡನ್ನು ಚೆಲ್ಲುತ್ತಾರೆ. ಇದನ್ನು ಅಂಪೈರ್​ ಔಟ್​ ಎಂದು ಪರಿಗಣಿಸುತ್ತಾರೆ.

ನ್ಯೂ ಸೌಥ್​ ವೇಲ್ಸ್​ ಅವರಿಗೆ ಮೊದಲ ಇನ್ನಿಂಗ್ಸ್​ನ ವಿಲಕ್ಷಣ ಅಂತ್ಯವಿದು ಎಂದು ಬರೆದು ಕ್ರಿಕೆಟ್​.ಕಾಮ್​.ಎಯು ಟ್ವಿಟರ್​ನಲ್ಲಿ ಬರೆದುಕೊಂಡು ವಿಡಿಯೋವನ್ನು ಪೋಸ್ಟ್​ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನೇಕ ನೆಟ್ಟಿಗರು ಅಂಪೈರ್​ ಅದನ್ನು ಔಟೆಂದು ಪರಿಗಣಿಸಬಾರದು ಎಂದಿದ್ದಾರೆ.

ನಿಜಕ್ಕೂ ಇದು ಅಧಿಕೃತ ಕ್ಯಾಚ್​ ಅಲ್ಲ. ತನ್ನ ದೇಹವನ್ನು ನಿಯಂತ್ರಿಸಲು ಸಾಧ್ಯವಾಗದೇ ಕ್ಯಾಚನ್ನು ಕೈಚೆಲ್ಲಿದ್ದಾರೆ. ಇದು ಖಂಡಿತವಾಗಿಯೂ ಔಟ್​ ಅಲ್ಲವೇ ಅಲ್ಲ ಎಂದು ಅನೇಕರು ತಮ್ಮದೇ ರೀತಿಯಲ್ಲಿ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, 381 ರನ್​ಗಳೊಂದಿಗೆ ನ್ಯೂ ಸೌಥ್​ ವೇಲ್ಸ್​ ಮೊದಲ ಇನ್ನಿಂಗ್ಸ್​ ಮುಗಿಸಿದೆ. ಕ್ವೀನ್ಸ್​ಲ್ಯಾಂಡ್​ ತಂಡ ಮೊದಲ ಇನ್ನಿಂಗ್ಸ್​ ಆರಂಭಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net