

ಲಂಡನ್: ಪ್ರವಾಸಿ ಭಾರತ ತಂಡದ ಎದುರು ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿನ ರುಚಿ ಕಂಡಿರುವ ಆತಿಥೇಯ ಇಂಗ್ಲೆಂಡ್ ತಂಡ, ಲೀಡ್ಸ್‌ನಲ್ಲಿ ಆಗಸ್ಟ್ 25 ರಿಂದ ನಡೆಯಲಿರುವ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಆಘಾತ ಕಂಡಿದೆ. ಭುಜದ ನೋವಿಗೆ ತುತ್ತಾಗಿರುವ ವೇಗಿ ಮಾರ್ಕ್‌ವುಡ್ 3ನೇ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ. ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಮಾರ್ಕ್ ವುಡ್ ಗಾಯಗೊಂಡಿದ್ದರು. ಈಗಾಗಲೇ ಹಲವು ಪ್ರಮುಖ ಆಟಗಾರರ ಅಲಭ್ಯತೆಯಿಂದ ಸೊರಗಿರುವ ಇಂಗ್ಲೆಂಡ್, ಇದೀಗ ಮತ್ತೆ ಹಿನ್ನಡೆ ಅನುಭವಿಸಿದಂತಾಗಿದೆ.
ಮಾನಸಿಕ ಸಡೃಢತೆಗಾಗಿ ಬೆನ್ ಸ್ಟೋಕ್ಸ್ ಸರಣಿಯಿಂದ ಹಿಂದೆ ಸರಿದಿದ್ದರೆ, ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಬಿದಿದ್ದಾರೆ. ಇದೀಗ ಗಾಯಾಳುಗಳ ಪಟ್ಟಿಗೆ ಮಾರ್ಕ್ ವುಡ್ ಸೇರ್ಪಡೆಯಾಗಿದ್ದಾರೆ. ‘ಸದ್ಯ ಚಿಕಿತ್ಸೆಯಲ್ಲಿ ಮುಂದುವರಿದಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಅವರ ಲಭ್ಯತೆ ಕುರಿತು ಸ್ಪಷ್ಟನೆ ಸಿಗಲಿದೆ’ ಎಂದು ಇಂಗ್ಲೆಂಡ್ ತಂಡದ ಮುಖ್ಯಕೋಚ್ ಕ್ರಿಸ್ ಸಿಲ್ವರ್‌ವುಡ್ ತಿಳಿಸಿದ್ದಾರೆ.
3ನೇ ಟೆಸ್ಟ್ ಪಂದ್ಯ ಲೀಡ್ಸ್‌ನ ಹೆಡ್ಡಿಂಗ್‌ಗ್ಲೇ ಮೈದಾನದಲ್ಲಿ ಆಗಸ್ಟ್ 25 ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಡ್ರಾಗೊಂಡಿದ್ದರೆ, ಭಾರತ ಎರಡನೇ ಟೆಸ್ಟ್ ಪಂದ್ಯವನ್ನು 151 ರಿಂದ ವಶಪಡಿಸಿಕೊಂಡಿತ್ತು. 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆಯಲ್ಲಿದೆ.