ದೇಶಕ್ಕಾಗಿ ಪದಕ ಗೆಲ್ಲಬಾರದಿತ್ತು; ಖೇಲ್​ ರತ್ನ ಪ್ರಶಸ್ತಿ ಕುರಿತು ಮೌನ ಮುರಿದ Manu Bhaker

Untitled design (1)
Published on

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​​​​​​​ 2024ರಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ ಭಾರತದ ಅಗ್ರ ಶೂಟರ್ ಮನು ಭಾಕರ್(Manu Bhaker) ಅವರ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಪರಿಗಣಿಸಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಪ್ರಶಸ್ತಿಗಾಗಿ ಆನ್‌ಲೈನ್ ಪೋರ್ಟಲ್‌ನಲ್ಲಿ ತನ್ನ ಹೆಸರನ್ನು ಸಲ್ಲಿಸಿದ್ದರೂ 30 ಹೆಸರುಗಳ ಶಾರ್ಟ್‌ಲಿಸ್ಟ್‌ಗೆ ಸೇರಿಸಲು ವಿಫಲವಾಗಿದೆ ಎಂದು ಮನು ಭಾಕರ್​ ನಿರಾಶೆ ವ್ಯಕ್ತಪಡಿಸಿದ್ದಾರೆ.

ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ದೇಶದ ಮೊದಲ ಆಟಗಾರ್ತಿ ಮನು ಭಾಕರ್​​, ತಮ್ಮ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಪರಿಗಣಿಸದಿದ್ದಕ್ಕಾಗಿ ನಿರಾಶೆಗೊಂಡಿದ್ದಾರೆ. ಈ ಬಗ್ಗೆ ಮನು ಭಾಕರ್​ ತಂದೆ ಕ್ರೀಡಾ ಸಚಿವಾಲಯ ಮತ್ತು ಖೇಲ್ ರತ್ನ ನಾಮನಿರ್ದೇಶಿತರ ಪಟ್ಟಿಯನ್ನು ಅಂತಿಮಗೊಳಿಸುವ ಸಮಿತಿಯ ಮೇಲೆ ಕಾಮೆಂಟ್ ಮಾಡಿದ್ದಾರೆ.

ಮನು ಭಾಕರ್ ಅವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಸಚಿವಾಲಯ ನೀಡಿರುವ ಕಾರಣವನ್ನು ಮನು ಅವರ ತಂದೆ ನಿರಾಕರಿಸಿದ್ದಾರೆ.

ಮನುವನ್ನು ಶೂಟಿಂಗ್‌ನಂತಹ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತೇನೆ ಎಂದು ಅವರ ತಂದೆ ರಾಮ್ ಕಿಶನ್ ಹೇಳಿದ್ದಾರೆ. ಬದಲಾಗಿ ಮನುವನ್ನು ಕ್ರಿಕೆಟಿಗನನ್ನಾಗಿ ಮಾಡಬೇಕಿತ್ತು. ಶೂಟಿಂಗ್ ಕ್ರೀಡೆಯನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸಿದಕ್ಕಾಗಿ ನಾನು ವಿಷಾದಿಸುತ್ತೇನೆ. ಬದಲಿಗೆ ಮನುವನ್ನು ಕ್ರಿಕೆಟಿಗೆ ಸೇರಿಸಬೇಕಿತ್ತು, ಆಗ ಪ್ರಶಸ್ತಿ, ಪುರಸ್ಕಾರಗಳೆಲ್ಲ ಅವರ ಪಾಲಾಗುತ್ತಿದ್ದವು ಎಂದು ಹೇಳಿದ್ದಾರೆ.

ಒಂದೇ ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದರು. ಈ ಹಿಂದೆ ಯಾವುದೇ ಭಾರತೀಯರು ಮಾಡದ ಸಾಧನೆಯನ್ನು ಮನು ಭಾಕರ್​ ಮಾಡಿದ್ದಾರೆ. ನನ್ನ ಮಗು ದೇಶಕ್ಕಾಗಿ ಇನ್ನೇನು ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಿ? ಅವರ ಶ್ರಮವನ್ನು ಸರ್ಕಾರ ಗುರುತಿಸಿ ಗಮನಹರಿಸಬೇಕು ಎಂದಿದ್ದಾರೆ. ಅಲ್ಲದೆ ಮನು ಭಾಕರ್​ ಬಳಿ ಈ ಬಗ್ಗೆ ಮಾತನಾಡಿದ್ದಾಗಿ ಹೇಳಿದ ಅವರು, ಅವಳು ಈ ಎಲ್ಲದರಿಂದ ನಿರಾಶೆಗೊಂಡಿದ್ದಾಳೆ.ನಾನು ಒಲಿಂಪಿಕ್ಸ್‌ಗೆ ಹೋಗಿ ದೇಶಕ್ಕಾಗಿ ಪದಕಗಳನ್ನು ಗೆಲ್ಲಬಾರದಿತ್ತು. ಅಥ್ಲೀಟ್ ಆಗಬಾರದಿತ್ತು ಅಂತ ಹೇಳಿದ್ರು ಎಂಬುದಾಗಿ ತಿಳಿಸಿದರು.

ಇನ್ನೂ ಪ್ರಶಸ್ತಿ ಸಿಗುವ ಭರವಸೆ ಇದೆ

ಮನು ಭಾಕರ್​​ ವೆಬ್​ಪೋರ್ಟಲ್​​​ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು ಎಂದು ವರದಿಯಾಗಿದೆ. ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಕ್ರೀಡಾ ಸಚಿವಾಲಯ ಮತ್ತು ಫೆಡರೇಶನ್ ಮಾತುಕತೆ ನಡೆಸುತ್ತಿದೆ. ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ಮನು ಹೇಳಿದ್ದಾರೆ. ಹಾಗಿದ್ದಲ್ಲಿ ಸಮಿತಿಯು ಅವರ ಹೆಸರನ್ನು ನೋಡಿರಬೇಕು. ಪರಿಸ್ಥಿತಿ ಏನೇ ಇರಲಿ ಫೆಡರೇಶನ್ ಸಚಿವಾಲಯವನ್ನು ಸಂಪರ್ಕಿಸಿ ಅವರ ಹೆಸರನ್ನು ಸೇರಿಸಲು ಅಧಿಕಾರಿಗಳಿಗೆ ಮನವಿ ಮಾಡಿದೆ ಎಂದು ಮೂಲವೊಂದು ತಿಳಿಸಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net