

ಪ್ಯಾರಿಸ್: ಕಳೆದ 6 ವರ್ಷಗಳಿಂದ ಪ್ರತಿದಿನ 6 ಗಂಟೆಗಳ ಕಾಲ 1.4 ಕೆಜಿ ಭಾರದ ಪಿಸ್ತೂಲ್ ಹಿಡಿದು ಅಭ್ಯಾಸ ನಡೆಸುವ ಮನು ಭಾಕರ್ ಬಲಗೈಯಲ್ಲಿ ಜಜ್ಜಿದ ಗಾಯದ ಗುರುತು ಶಾಶ್ವತವಾಗಿ ಉಳಿದುಕೊಂಡು ಬಿಟ್ಟಿದೆ. ಏನೇ ಮಾಡಿದರೂ ಈ ಗುರುತು ಹೋಗುತ್ತಿಲ್ಲ ಎಂದು ಮನು ಕೈ ತೋರಿಸಿ ಹೇಳಿದ್ದಾರೆ. ನಿಮ್ಮ ಅವಳಿ ಕಂಚಿನ ಸಾಧನೆಯೂ ಅದೇ ರೀತಿ ಶಾಶ್ವತವಾಗಿ ಉಳಿಯುವಂಥದ್ದು ಎಂಬುದು ಅವರ ಅಭಿಮಾನಿಗಳ ನುಡಿಯಾಗಿದೆ.
"ಟೋಕಿಯೊದಲ್ಲಿ ನಾನು ಆತ್ಮವಿಶ್ವಾಸ ಹೊಂದಿರಲಿಲ್ಲ. ಪ್ರತಿಯೊಂದಕ್ಕೂ ಹೆದರುತ್ತಿದ್ದೆ. ಆದರೆ ಈ ಬಾರಿ ಪ್ಯಾರಿಸ್ನಲ್ಲಿ ಹೆಚ್ಚು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದೆ. ಅನುಭವದಿಂದ ನಾನು ಪಕ್ವಗೊಂಡಿದ್ದೆ. ಪ್ರಮುಖವಾಗಿ ನನ್ನ ಕೋಚ್ ಜಸ್ಪಾಲ್ ರಾಣಾ ಅವರಿಂದಾಗಿ ಆ ಆತ್ಮವಿಶ್ವಾಸ ಲಭಿಸಿತು. ಈ ಸ್ಪರ್ಧೆಗಳಿಗಿಂತ ಅವರು ನೀಡುವ ತರಬೇತಿಯೇ ಕಠಿಣವಾಗಿರುತ್ತದೆ. ತರಬೇತಿಯ ವೇಳೆ ಕಲಿತಿದ್ದನ್ನು ಸ್ಪರ್ಧೆಯ ವೇಳೆ ಪುನರಾವರ್ತಿಸುವುದಷ್ಟೇ ನನ್ನ ಕೆಲಸವಾಗಿರುತ್ತದೆ. ಪ್ರತಿ ವ್ಯಕ್ತಿಯ ಜೀವನದಲ್ಲಿ ಅನುಭವ ಕಲಿಸುವ ಪಾಠ ಎಲ್ಲಕ್ಕಿಂತ ದೊಡ್ಡದು' ಎಂದು ಮನು ಭಾಕರ್ ಹೇಳಿದ್ದಾರೆ.