

ಜಲಂಧರ್: ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಬುಧವಾರ ತಮ್ಮ ಬಹುಕಾಲದ ಗೆಳತಿ ಮಲೇಷ್ಯಾದ ಲೀ ಸಿದ್ದಿಕಿ ಅವರನ್ನು ವರಿಸಿದರು. ಪಂಜಾಬ್‌ನ ಜಲಂಧರ್‌ನಲ್ಲಿರುವ ಜಿಟಿಬಿ ನಗರದಲ್ಲಿ ಮದುವೆ ಸಮಾರಂಭ ನಡೆಯಿತು. 2012ರಲ್ಲಿ ಸುಲ್ತಾನ್ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಆಡಲು ಮನ್‌ಪ್ರೀತ್ ಸಿಂಗ್ ಭಾರತ ಜೂನಿಯರ್ ತಂಡದೊಂದಿಗೆ ಮಲೇಷ್ಯಾಗೆ ತೆರಳಿದ್ದ ವೇಳೆ ಲೀ ಸಿದ್ಧಿಕಿ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೆ ತಿರುಗಿ, ಆ ಬಳಿಕ ಪ್ರೀತಿಗೆ ತಿರುಗಿತ್ತು.
ಲೀ ಸಿದ್ದಿಕಿ ಮಲೇಷ್ಯಾದ ಖಾಸಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ತಾಯಿ ಮಸಿತಾ ಕೂಡ ಮಲೇಷ್ಯಾ ಆರ್ಮಿ ಹಾಕಿ ತಂಡದ ಸದಸ್ಯೆಯಾಗಿದ್ದರು. ಮನ್‌ಪ್ರೀತ್ ಹಾಗೂ ಸಿದ್ಧಿಕಿ 2014ರಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲೇ ಮದುವೆಯಾಗಲು ಯೋಚಿಸಿದ್ದರೂ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿತ್ತು. ಲೀ ಸಿದ್ಧಿಕಿ ಮದುವೆಗಾಗಿ ಮಲೇಷ್ಯಾ ಸರ್ಕಾರ ಹಾಗೂ ಭಾರತೀಯ ಗೃಹ ಸಚಿವಾಲಯದಿಂದ ವಿಶೇಷ ಅನುಮತಿ ಪಡೆಯಲಾಗಿತ್ತು. ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು, ರಾಷ್ಟ್ರೀಯ ತಂಡದ ಸಹ ಆಟಗಾರರಾದ ಮಂದೀಪ್ ಸಿಂಗ್, ವರುಣ್ ಕುಮಾರ್ ಮಾತ್ರ ಉಪಸ್ಥಿತರಿದ್ದರು.