

ಸೂರತ್: ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್ ಮನೀಷ್ ಪಾಂಡೆ (67*ರನ್, 121 ಎಸೆತ, 6 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 5ನೇ ಲೀಗ್ ಪಂದ್ಯದಲ್ಲಿ ಆತಿಥೇಯ ರೈಲ್ವೇಸ್ ಎದುರು 1 ವಿಕೆಟ್ನಿಂದ ರೋಚಕ ಗೆಲುವು ಸಾಧಿಸಿದೆ.
ಲಾಲ್ಬಾಯಿ ಕಂಟ್ರಾಕ್ಟರ್ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಕಾದಾಟದಲ್ಲಿ 8 ವಿಕೆಟ್ಗೆ 209 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ರೈಲ್ವೇಸ್, ಮೊಹಮದ್ ಸೈಫ್ (82) ದಿಟ್ಟ ಆಟದ ನಡುವೆ ವೇಗಿ ವೈಶಾಕ್ ವಿಜಯ್ಕುಮಾರ್ (67ಕ್ಕೆ 5) ದಾಳಿಗೆ ಕುಸಿದು 244 ರನ್ಗಳಿಗೆ ಸರ್ವಪತನ ಕಂಡಿತು. ಇದರಿಂದ ಲೋ-ಸ್ಕೋರಿಂಗ್ ಪಂದ್ಯದಲ್ಲಿ 226 ರನ್ಗಳ ಕಠಿಣ ಸವಾಲನ್ನೇ ಪಡೆದ ಕರ್ನಾಟಕ ತಂಡ ಯುವ ಬ್ಯಾಟರ್ಗಳ ವೈಲ್ಯದ ನಡುವೆ ಮನೀಷ್ ಪಾಂಡೆ ಸಾಹಸದಿಂದ 82.4 ಓವರ್ಗಳಲ್ಲಿ 9 ವಿಕೆಟ್ಗೆ 229 ರನ್ ಪೇರಿಸಿ ಇನ್ನೊಂದು ದಿನ ಬಾಕಿ ಇರುವಂತೆಯೇ ಗೆಲುವು ಒಲಿಸಿಕೊಂಡಿತು.
ಮನೀಷ್ ಏಕಾಂಗಿ ಸಾಹಸ
ಚೇಸಿಂಗ್ ವೇಳೆ ಆರಂಭಿಕ ಡಿ. ನಿಶ್ಚಲ್ (1) ವಿಕೆಟ್ ಬೇಗನೆ ಕಳೆದುಕೊಂಡ ಕರ್ನಾಟಕಕ್ಕೆ ಆರ್. ಸಮರ್ಥ್ (35) ಮತ್ತು ಕೆವಿ ಅನೀಶ್ (34) 2ನೇ ವಿಕೆಟ್ಗೆ 68 ರನ್ ಪೇರಿಸಿ ಚೇತರಿಕೆ ನೀಡಿದರು. ನಂತರದಲ್ಲಿ ಎಡಗೈ ಸ್ಪಿನ್ನರ್ ಆಕಾಶ್ ಪಾಂಡೆ (94ಕ್ಕೆ 5) ದಾಳಿಗೆ ಕುಸಿದ ರಾಜ್ಯ ತಂಡ 29 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತು. ಹಂಗಾಮಿ ನಾಯಕ ನಿಕಿನ್ ಜೋಸ್ 2ನೇ ಇನಿಂಗ್ಸ್ನಲ್ಲೂ ಖಾತೆ ತೆರೆಯಲು ವಿಫಲರಾದರು. ಆಗ ತಂಡಕ್ಕೆ ಆಸರೆಯಾಗಿ ನಿಂತ ಮನೀಷ್, ವಿಕೆಟ್ ಕೀಪರ್-ಬ್ಯಾಟರ್ ಶರತ್ ಶ್ರೀನಿವಾಸ್ (23) ಜತೆಗೆ 34 ರನ್ ಸೇರಿಸಿ ಗೆಲುವಿನಾಸೆಗೆ ಮರುಜೀವ ತುಂಬಿದರೆ, ವೈಶಾಕ್ ವಿಜಯ್ಕುಮಾರ್ (38) ಜತೆಗೆ 64 ರನ್ ಸೇರಿಸಿ ಗೆಲುವಿನ ಸನಿಹ ಕೊಂಡೊಯ್ದರು. ಜಯದಿಂದ 12 ರನ್ ದೂರವಿದ್ದಾಗ 9ನೇ ವಿಕೆಟ್ ರೂಪದಲ್ಲಿ ವಿದ್ವತ್ ಕಾವೇರಪ್ಪ (8) ಔಟಾದರು. ಅಂತಿಮವಾಗಿ ಕೊನೇ ಬ್ಯಾಟರ್ ವಾಸುಕಿ ಕೌಶಿಕ್ (1*) ಜತೆಗೂಡಿ ಮನೀಷ್ ಪಾಂಡೆ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.
ರೈಲ್ವೇಸ್: 155 ಮತ್ತು 72 ಓವರ್ಗಳಲ್ಲಿ 244 (ಸೈಫ್ 82, ವೈಶಾಕ್ 67ಕ್ಕೆ 5, ವಿದ್ವತ್ 46ಕ್ಕೆ 2), ಕರ್ನಾಟಕ: 174 ಮತ್ತು 82.4 ಓವರ್ಗಳಲ್ಲಿ 9 ವಿಕೆಟ್ಗೆ 229 (ಸಮರ್ಥ್ 35, ಡಿ. ನಿಶ್ಚಲ್ 1, ಅನೀಶ್ 34, ನಿಕಿನ್ ಜೋಸ್ 0, ಹಾರ್ದಿಕ್ 14, ಮನೀಷ್ ಪಾಂಡೆ 67*, ಕಿಶನ್ 0, ಶರತ್ 23, ವೈಶಾಕ್ 38, ವಿದ್ವತ್ 8, ಕೌಶಿಕ್ 1*, ಆಕಾಶ್ ಪಾಂಡೆ 94ಕ್ಕೆ 5, ಸೈಫ್ 43ಕ್ಕೆ 2, ಹಿಮಾಂಶು 24ಕ್ಕೆ 2). ಪಂದ್ಯಶ್ರೇಷ್ಠ: ಮನೀಷ್ ಪಾಂಡೆ.
ರಾಜ್ಯಕ್ಕೆ ಮುಂದಿನ ಪಂದ್ಯ
ಎದುರಾಳಿ: ತಮಿಳುನಾಡು
ಯಾವಾಗ: ಫೆಬ್ರವರಿ 9-12
ಎಲ್ಲಿ: ಚೆನ್ನೈ
ರಾಜ್ಯಕ್ಕೆ ಹೆಚ್ಚಿನ ನಾಕೌಟ್ ಆಸೆ
ಆಡಿದ 5ನೇ ಪಂದ್ಯದಲ್ಲಿ ಕಂಡ 3ನೇ ಜಯದೊಂದಿಗೆ ಕರ್ನಾಟಕ ತಂಡ ನಾಕೌಟ್ ಹಂತಕ್ಕೇರುವ ಆಸೆ ವೃದ್ಧಿಸಿಕೊಂಡಿದೆ. ಸಿ ಗುಂಪಿನ ಮತ್ತೊಂದು ಪ್ರಬಲ ತಂಡ ತಮಿಳುನಾಡು ಕೂಡ ತನ್ನ 5ನೇ ಪಂದ್ಯದಲ್ಲಿ ಗೆಲುವಿನ ಸನಿಹದಲ್ಲಿದೆ. ತಮಿಳುನಾಡು ಗೆದ್ದರೆ, ಕರ್ನಾಟಕದ ಜತೆಗೆ 21 ಅಂಕಗಳ ಸಮಬಲ ಸಾಧಿಸಲಿದ್ದು, ರನ್ರೇಟ್ನಲ್ಲಿ ಮೇಲುಗೈ ಸಾಧಿಸುವ ತಂಡಕ್ಕೆ ಅಗ್ರಸ್ಥಾನ ಒಲಿಯಲಿದೆ. ಸದ್ಯ ತ್ರಿಪುರ (14), ಗುಜರಾತ್ (13) ಕ್ರಮವಾಗಿ 3,4ನೇ ಸ್ಥಾನದಲ್ಲಿವೆ. ಗುಂಪಿನ ಅಗ್ರ 2 ತಂಡಗಳಿಗೆ ಕ್ವಾರ್ಟರ್ಫೈನಲ್ಗೇರುವ ಅವಕಾಶವಿರುವುದರಿಂದ ರಾಜ್ಯ ತಂಡದ ಹಾದಿ ಸುಗಮಗೊಂಡಿದೆ. ಮುಂದಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಆಡಿದ ಬಳಿಕ ರಾಜ್ಯ ತಂಡ, ಫೆ. 16ರಿಂದ ಹುಬ್ಬಳ್ಳಿಯಲ್ಲಿ ಚಂಡೀಗಡ ಎದುರು ತನ್ನ ಕೊನೇ ಲೀಗ್ ಪಂದ್ಯ ಆಡಲಿದೆ.