

ವಿಶಾಖಪಟ್ಟಣ: ಯುವ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (209ರನ್, 290 ಎಸೆತ, 19 ಬೌಂಡರಿ, 7 ಸಿಕ್ಸರ್) ಚೊಚ್ಚಲ ದ್ವಿಶತಕ ಸಂಭ್ರಮದ ಬಳಿಕ ವೇಗಿ ಜಸ್ಪ್ರೀತ್ ಬುಮ್ರಾ (45ಕ್ಕೆ 6) ನಡೆಸಿದ ಅಮೋ ಬೌಲಿಂಗ್ ದಾಳಿಯ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ಮೇಲುಗೈ ಸಾಧಿಸಿದೆ. ಆಕ್ರಮಣಕಾರಿ ಬಾಜ್ಬಾಲ್ ಕಾರ್ಯತಂತ್ರವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ ಬುಮ್ರಾ, ರಿವರ್ಸ್ ಸ್ವಿಂಗ್-ಯಾರ್ಕರ್ ಎಸೆತಗಳ ಮೂಲಕ ಆಂಗ್ಲರನ್ನು ಕಂಗೆಡಿಸಿದರು. ದ್ವೀತಿಯ ಇನಿಂಗ್ಸ್ನಲ್ಲಿ ಬಿರುಸಿನ ಆರಂಭ ಕಂಡಿರುವ ಭಾರತ, ಬೆನ್ ಸ್ಟೋಕ್ಸ್ ಬಳಗಕ್ಕೆ ಸವಾಲಿನ ಗುರಿ ನೀಡುವತ್ತ ದೃಷ್ಟಿ ನೆಟ್ಟಿದೆ.
ಮೊದಲ ಟೆಸ್ಟ್ ಶತಕವೀರ ಒಲಿ ಪೋಪ್ ವಿಶಾಖಪಟ್ಟಣದಲ್ಲಿ 2ನೇ ದಿನ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ಯಾರ್ಕರ್ ಎಸೆತವನ್ನು ಎದುರಿಸಲಾಗದೆ ಕ್ಲೀನ್ಬೌಲ್ಡ್ ಆದರು. ಈ ವೇಳೆ ಪೋಪ್ ವಿಕೆಟ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಇದರ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು "ವರ್ಷದ ಯಾರ್ಕರ್' ಎಂದು ಬಣ್ಣಿಸಲಾಗುತ್ತಿದೆ.
ಬುಮ್ರಾ ಯಾರ್ಕರ್ಬಾಲ್ ಶಾಕ್
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತೀಯರ ಸ್ಪಿನ್ ದಾಳಿಯನ್ನು ಸ್ವೀಪ್-ರಿವರ್ಸ್ಸ್ವೀಪ್ಗಳ ಮೂಲಕವೇ ನಿಭಾಯಿಸಿ ಯಶಸ್ಸು ಕಂಡಿದ್ದ ಆಂಗ್ಲರ ಬಾಜ್ಬಾಲ್ ತಂತ್ರಗಾರಿಕೆ ಈ ಬಾರಿ ಬುಮ್ರಾರ ಯಾರ್ಕರ್-ರಿವರ್ಸ್ ಸ್ವಿಂಗ್ ಎಸೆತಗಳ ಎದುರು ದಿಕ್ಕೆಟ್ಟಿತು. ಆರಂಭಿಕ ಜಾಕ್ ಕ್ರೌಲಿ (76 ರನ್, 78 ಎಸೆತ, 11 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್ಗೆ ಬೆನ್ ಡಕೆಟ್ (21) ಜತೆಗೂಡಿ 62 ಎಸೆತಗಳಲ್ಲೇ 59 ರನ್ ಕಲೆಹಾಕುವ ಮೂಲಕ ಆಂಗ್ಲರಿಗೆ ಉತ್ತಮ ಆರಂಭವನ್ನೇ ಒದಗಿಸಿದರು. ಡಕೆಟ್ ಸ್ಪಿನ್ನರ್ ಕುಲದೀಪ್ಗೆ ವಿಕೆಟ್ ಒಪ್ಪಿಸಿದ ಬಳಿಕ ಕ್ರೌಲಿ, ಒಲಿ ಪೋಪ್ (23) ಜತೆಗೂಡಿ 73 ಎಸೆತಗಳಲ್ಲಿ ಮತ್ತೆ 55 ರನ್ ಕಲೆಹಾಕಿದರು. ಈ ವೇಳೆ ಇಂಗ್ಲೆಂಡ್ 1 ವಿಕೆಟ್ಗೆ 114 ರನ್ ಗಳಿಸಿ ಸುಸ್ಥಿತಿಯಲ್ಲೇ ಇತ್ತು. ಅಕ್ಷರ್ ಪಟೇಲ್ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಇಂಗ್ಲೆಂಡ್ ತಂಡ ಬುಮ್ರಾಘಾತಕ್ಕೆ ತತ್ತರಿಸಿತು. ಪೋಪ್, ಜೋ ರೂಟ್ (5), ಜಾನಿ ಬೇರ್ಸ್ಟೋ (25) ಬುಮ್ರಾಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಆಂಗ್ಲರ ಹೋರಾಟ ಚಾಲ್ತಿಯಲ್ಲಿಟ್ಟಿದ್ದ ನಾಯಕ ಬೆನ್ ಸ್ಟೋಕ್ಸ್ (47) ಮತ್ತು ಟಾಮ್ ಹಾರ್ಟ್ಲಿ (21) ಕೂಡ ಬುಮ್ರಾ ದಾಳಿ ಎದುರು ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಉಳಿದ ವಿಕೆಟ್ಗಳು ಕುಲದೀಪ್ ಪಾಲಾದವು. ಈ ನಡುವೆ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಮಾತ್ರ ಆಂಗ್ಲರ ಬಾಜ್ಬಾಲ್ನಿಂದ ಹೆಚ್ಚಿನ ಹೊಡೆತ ತಿಂದರು.
ಜಸ್ಪ್ರೀತ್ ಬುಮ್ರಾ ಟೆಸ್ಟ್ನಲ್ಲಿ ಅತಿವೇಗವಾಗಿ 150 ವಿಕೆಟ್ ಕಬಳಿಸಿದ ಭಾರತೀಯ ವೇಗಿ ಎನಿಸಿದರು. ಬುಮ್ರಾ 34 ಟೆಸ್ಟ್ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕಪಿಲ್ ದೇವ್ 39 ಟೆಸ್ಟ್ಗಳಲ್ಲಿ ಸಾಧಿಸಿದ್ದು ಹಿಂದಿನ ದಾಖಲೆ. ಬುಮ್ರಾ ಒಟ್ಟಾರೆಯಾಗಿ ಭಾರತದ ಪರ 3ನೇ ಅತಿವೇಗದ 150 ವಿಕೆಟ್ ಸಾಧನೆ ಮಾಡಿದರು. ಆರ್. ಅಶ್ವಿನ್ (29) ಮತ್ತು ರವೀಂದ್ರ ಜಡೇಜಾ (32) ಮೊದಲೆರಡು ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ 2000ನೇ ಇಸವಿ ಬಳಿಕ ಭಾರತದ ನೆಲದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ವೇಗಿ ಎನಿಸಿದರು. 2018ರಲ್ಲಿ ವಿಂಡೀಸ್ ವಿರುದ್ಧ ಉಮೇಶ್ ಯಾದವ್ 88 ರನ್ಗಳಿಗೆ 6 ವಿಕೆಟ್ ಕಬಳಿಸಿದ್ದು ಹಿಂದಿನ ದಾಖಲೆ.