ವಿಜಯ್​ ಹಜಾರೆ ಟ್ರೋಫಿಗೆ ಕರ್ನಾಟಕ ತಂಡದಿಂದ ಮನೀಷ್​ ಪಾಂಡೆಗೆ ಕೊಕ್​; ಅನುಭವಿ ಬ್ಯಾಟರ್​ಗೆ ಮುಚ್ಚಿದ ಬಾಗಿಲು!

web manish
Published on

ಬೆಂಗಳೂರು: ಮುಂಬರುವ ವಿಜಯ್​ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್​ ಟೂರ್ನಿಗೆ ಕರ್ನಾಟಕದ 32 ಆಟಗಾರರ ಸಂಭಾವ್ಯ ತಂಡವನ್ನು ಕೆಎಸ್​ಸಿಎ ಮಂಗಳವಾರ ಪ್ರಕಟಿಸಿದೆ. ಫಾರ್ಮ್​ನಲ್ಲಿಲ್ಲದ ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ಅವರನ್ನು ಕೈಬಿಡುವ ದಿಟ್ಟ ನಿರ್ಧಾರವನ್ನು ಜೆ. ಅಭಿರಾಮ್​ ಸಾರಥ್ಯದ ಆಯ್ಕೆ ಸಮಿತಿ ತೆಗೆದುಕೊಂಡಿದೆ.

ಡಿಸೆಂಬರ್​ 21ರಿಂದ ನಡೆಯಲಿರುವ ಟೂರ್ನಿಗೆ ರಾಷ್ಟ್ರೀಯ ತಂಡದ ಆಟಗಾರರಾದ ಕೆಎಲ್​ ರಾಹುಲ್​, ಪ್ರಸಿದ್ಧ ಕೃಷ್ಣ, ದೇವದತ್​ ಪಡಿಕ್ಕಲ್​ ಕೂಡ ಸಂಭಾವ್ಯರಲ್ಲಿದ್ದಾರೆ. ಪರಾಸ್​ ಗುರ್ಬಕ್ಷ್​ ಆರ್ಯ, ಶಿಖರ್​ ಶೆಟ್ಟಿ ತಂಡದಲ್ಲಿರುವ ಹೊಸಮುಖವಾಗಿದ್ದಾರೆ. ಮನೀಷ್​ ಕೈಬಿಡುವ ಮೂಲಕ ಆಯ್ಕೆಗಾರರು, ಇತ್ತೀಚೆಗೆ ಸ್ಥಿರ ನಿರ್ವಹಣೆ ತೋರಲು ಪರದಾಡುತ್ತಿರುವ ನಾಯಕ ಮಯಾಂಕ್​ ಅಗರ್ವಾಲ್​ಗೂ ಎಚ್ಚರಿಕೆಯ ಗಂಟೆ ರವಾನಿಸಿದಂತಾಗಿದೆ.

ಗಾಯದ ಸಮಸ್ಯೆಯಿಂದಾಗಿ ರಣಜಿ ಟ್ರೋಫಿ, ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಗಳಿಂದ ಹೊರಗುಳಿದಿದ್ದ ವೇಗಿ ವಿದ್ವತ್​ ಕಾವೇರಪ್ಪ ಸಂಭಾವ್ಯರನ್ನು ಸ್ಥಾನ ಪಡೆದಿದ್ದು, ವಿಜಯ್​ ಹಜಾರೆ ಟ್ರೋಫಿಯಲ್ಲಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಸಿ ಗುಂಪಿನಲ್ಲಿರುವ ಕರ್ನಾಟಕ ತಂಡ ಡಿ.21ರಂದು ಮುಂಬೈ ವಿರುದ್ಧ ಮೊದಲ ಪಂದ್ಯ ಆಡಲಿದೆ. ನಂತರ ಪುದುಚೇರಿ (ಡಿ.23), ಪಂಜಾಬ್​ (ಡಿ.26), ಅರುಣಾಚಲಪ್ರದೇಶ (ಡಿ.28), ಹೈದರಾಬಾದ್​ (ಡಿ.31), ಸೌರಾಷ್ಟ್ರ (ಜ.3), ನಾಗಾಲ್ಯಾಂಡ್​ (ಜ.5) ವಿರುದ್ಧ ಆಡಲಿದೆ.

ಸಂಭಾವ್ಯ ತಂಡ: ಕೆಎಲ್​ ರಾಹುಲ್​, ಮಯಾಂಕ್​ ಅಗರ್ವಾಲ್​, ಪ್ರಸಿದ್ಧ ಕೃಷ್ಣ, ದೇವದತ್​ ಪಡಿಕ್ಕಲ್​, ಚೇತನ್​ ಎಲ್​ಆರ್​, ಮ್ಯಾಕ್ನೀಲ್​ ನೋರೋನ್ಹಾ, ಶ್ರೇಯಸ್​ ಗೋಪಾಲ್​, ಕೆಎಲ್​ ಶ್ರೀಜಿತ್​ (ವಿ.ಕೀ), ಅಭಿನವ್​ ಮನೋಹರ್​, ಮನೋಜ್​ ಭಾಂಡಗೆ, ಹಾರ್ದಿಕ್​ ರಾಜ್​, ವಿ. ಕೌಶಿಕ್​, ವಿದ್ಯಾಧರ್​ ಪಾಟೀಲ್​, ಶುಭಾಂಗ್​ ಹೆಗ್ಡೆ, ಅಭಿಲಾಷ್​ ಶೆಟ್ಟಿ, ಮೊಹ್ಸಿನ್​ ಖಾನ್​, ಆರ್​. ಸ್ಮರಣ್​, ಲವನೀತ್​ ಸಿಸೋಡಿಯಾ (ವಿ.ಕೀ), ವೈಶಾಕ್​ ವಿ, ಮನ್ವಂತ್​ ಕುಮಾರ್​ ಎಲ್​, ಯಶೋವರ್ಧನ್​ ಪರಂತಾಪ್​, ಪ್ರವಿಣ್​ ದುಬೆ, ಎಂ. ವೆಂಕಟೇಶ್​, ನಿಕಿನ್​ ಜೋಸ್​, ಶಶಿಕುಮಾರ್​ ಕೆ, ಪರಸ್​ ಗುರ್ಬಕ್ಷ್​ ಆರ್ಯ, ಶಿಖರ್​ ಶೆಟ್ಟಿ, ಕಿಶನ್​ ಎಸ್​. ಬಿದರೆ, ಹರ್ಷಿಲ್​ ಧರ್ಮಾಣಿ, ವಿದ್ವತ್​ ಕಾವೇರಪ್ಪ, ಕೃತಿಕ್​ ಕೃಷ್ಣ (ವಿ.ಕೀ).

ಮನೀಷ್​ಗೆ ಮುಚ್ಚಿದ ಬಾಗಿಲು?

ಕಳೆದ ಎರಡು ದೇಶೀಯ ಕ್ರಿಕೆಟ್​ ಋತುವಿನಿಂದ ತೀವ್ರ ರನ್​ಬರ ಎದುರಿಸುತ್ತಿರುವ 35 ವರ್ಷದ ಮನೀಷ್​ ಪಾಂಡೆ ಅವರನ್ನು ಕೊನೆಗೂ ಕೈಬಿಡುವ ಮೂಲಕ ಕರ್ನಾಟಕ ಭವಿಷ್ಯದತ್ತ ಗಮನಹರಿಸಿದಂತಾಗಿದೆ. ಇದರೊಂದಿಗೆ ರಾಜ್ಯ ತಂಡದ ಪರ ಅವರ 17 ವರ್ಷಗಳ ವೃತ್ತೀಜಿವನ ಮುಕ್ತಾಯಗೊಂಡಂತಾಗಿದೆ. ಮನೀಷ್​ರನ್ನು ಇನ್ನು ರಾಜ್ಯದ ಮೂರೂ ಮಾದರಿಯ ತಂಡಗಳಿಗೂ ಮರುಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷ ಜೆ. ಅಭಿರಾಮ್​ ಸ್ಪಷ್ಟಪಡಿಸಿದ್ದಾರೆ. ಮನೀಷ್​ ಕಳೆದ ರಣಜಿ ಟ್ರೋಫಿ ಮೊದಲ ಹಂತದ 5 ಲೀಗ್​ ಪಂದ್ಯಗಳ 6 ಇನಿಂಗ್ಸ್​ಗಳಲ್ಲಿ 34.25ರ ಸರಾಸರಿಯಲ್ಲಿ ಕೇವಲ 1 ಅರ್ಧಶತಕ ಸಹಿತ 137 ರನ್​ ಮಾತ್ರ ಗಳಿಸಿದ್ದರು. ನಂತರ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20ಯ 5 ಪಂದ್ಯಗಳಲ್ಲೂ 29.25ರ ಸರಾಸರಿಯಲ್ಲಿ 117 ರನ್​ ಮಾತ್ರ ಗಳಿಸಿದ್ದರು. ಕಳೆದ ಐಪಿಎಲ್​ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲಬೆಲೆಗೆ ಕೆಕೆಆರ್​ ತಂಡಕ್ಕೆ ಮರಳಿರುವ ಮನೀಷ್​, ಮುಂದಿನ ವರ್ಷದ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರಿದರಷ್ಟೇ ವೃತ್ತೀಜಿವನವನ್ನು ಇನ್ನೂ ಕೆಲಕಾಲ ವಿಸ್ತರಿಸಲು ಅವಕಾಶ ಲಭಿಸುವ ನಿರೀಕ್ಷೆ ಇದೆ.

*ಮನೀಷ್​ ಪಾಂಡೆ ಕರ್ನಾಟಕ ಪರ ಅಮೋ ವೃತ್ತೀಜಿವನ ಕಂಡಿದ್ದಾರೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಹಂತದಲ್ಲಿ ಅವರು ಯುವಕರಿಗೆ ದಾರಿ ಬಿಟ್ಟುಕೊಡಬೇಕಾಗಿದೆ. ಪ್ರಖರ್​ ಚತುರ್ವೇದಿ, ಅನೀಶ್ವರ್​ ಗೌತಮ್​, ಕೆವಿ ಅನೀಶ್​ರಂಥ ಯುವ ಬ್ಯಾಟರ್​ಗಳನ್ನು ಕರ್ನಾಟಕ ಹೊಂದಿದೆ. ಅವರಿಗೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ. ರಣಜಿ ಟ್ರೋಫಿ 2ನೇ ಚರಣದ ಪಂದ್ಯಗಳಿಗೂ ಮನೀಷ್​ ರಾಜ್ಯ ತಂಡಕ್ಕೆ ಮರಳುವುದಿಲ್ಲ. ಮನೀಷ್​ಗೆ ಕರೆ ಮಾಡಿ ನಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿರುವೆ. ಅವರು ಕೋಚ್​ ಅಥವಾ ಬೇರಾವುದಾದರೂ ಪಾತ್ರದಲ್ಲಿ ಕರ್ನಾಟಕ ಕ್ರಿಕೆಟ್​ನಲ್ಲಿ ಮುಂದುವರಿಯಬೇಕೆಂದು ನಾವು ಬಯಸಿದ್ದೇವೆ.

| ಜೆ. ಅಭಿರಾಮ್​, ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net